ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದಿಂದ ದೇಶತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತಮ್ಮ ಭಾರತದ ನಾಗರೀಕತ್ವವನ್ನು ತೊರೆದಿದ್ದಾರೆ. ತಮಗೆ ಈ ಪೌರತ್ವ ಬೇಡ ಎಂದು ತಮ್ಮ ಪಾಸ್ಪೋರ್ಟ್ ಅನ್ನು ಆಂಟಿಗ್ಯೂನಲ್ಲಿ ಮರಳಿಸಿದ್ದಾರೆ. ಈ ನಡೆಯಿಂದಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕೆಲಸ ಇನ್ನು ಕಷ್ಟವಾಗಲಿದೆ.
ಆಂಟಿಗ್ಯೂನ ಭಾರತದ ಹೈ ಕಮಿಷನ್ಗೆ ಚೋಕ್ಸಿ ತಮ್ಮ ಬಳಿಯಿಂದ ಪಾಸ್ ಪೋರ್ಟ್ ಹಾಗೂ 177 ಡಾಲರ್ ಮರಳಿಸಿದ್ದಾರೆ.
ಮೆಹುಲ್ ಚೋಕ್ಸಿ ಆಂಟಿಗ್ಯೂ ಹಾಗೂ ಬಾರ್ಬುಡಾ ಪೌರತ್ವವನ್ನು 2018ರಲ್ಲಿ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ತಮ್ಮ ಭಾರತ ನಾಗರಿಕತ್ವವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12 ಸಾವಿರ ಕೋಟಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿಯ ಸಂಬಂಧಿಯಾಗಿರುವ ಮೆಹುಲ್ ಚೋಕ್ಸಿ ಕೂಡ ಈ ಪ್ರಕರಣದ ಪ್ರಮುಖ ಆರೋಪಿ. ಈ ಹಗರಣದ 2 ಕೇಸುಗಳಲ್ಲಿ ಚೋಕ್ಸಿ ವಿರುದ್ಧ ಚಾರ್ಜ್ಶೀಟ್ ದಾಖಲಾಗಿದೆ. ಈ ಪ್ರಕರಣದಲ್ಲಿ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 7080 ಕೋಟಿ ರೂ. ವಂಚಿಸಿದ್ದರು. ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದರು.
ಈಗಾಗಲೇ ಜೂನ್ನಲ್ಲಿ ಸಿಬಿಐ ಚೋಕ್ಸಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ಪೋಲ್ ಮೊರೆಹೋಗಿತ್ತು. ಈ ರೀತಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ನಂತರ ಆ ವ್ಯಕ್ತಿ ಯಾವುದೇ ದೇಶದಲ್ಲಿದ್ದರೂ ಇಂಟರ್ನ್ಯಾಷನಲ್ ಪೊಲೀಸ್ ಕೋಆಪರೇಷನ್ ಏಜೆನ್ಸಿ ಆತನನ್ನು ಬಂಧಿಸಲು ಅಧಿಕಾರವಿರುತ್ತದೆ.