ನವದೆಹಲಿ: ಅನಾರೋಗ್ಯಕ್ಕೀಡಾಗಿರುವ ಅರುಣ್ ಜೇಟ್ಲಿ ಶೀಘ್ರವೇ ಗುಣಮುಖರಾಗಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್, ಆರ್ಜಿಡಿ ಅಧ್ಯಕ್ಷ ಲಾಲೂಪ್ರಸಾದ್ ಯಾದವ್ ಮತ್ತಿತರರು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸರಿಯಿಲ್ಲವೆಂದು ಕೇಳಿ ಮನಸಿಗೆ ಬೇಸರವಾಗಿದೆ. ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಅವರೊಂದಿಗೆ ದಿನನಿತ್ಯ ಸಣ್ಣಪುಟ್ಟ ಜಗಳವಾಡುತ್ತಿದ್ದೆ. ಅವರು ಶೀಘ್ರ ಗುಣಮುಖರಾಗಲೆಂದು ನಾನು ನನ್ನ ಪಕ್ಷದ ಪರವಾಗಿ ಪ್ರೀತಿಯಿಂದ ಹಾರೈಸುತ್ತೇನೆ. ನಿಮ್ಮ ಈ ಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಸೇರಿ ಹಲವು ಬಿಜೆಪಿ ನಾಯಕರು, ಪ್ರತಿಪಕ್ಷಗಳ ಮುಖಂಡರು ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಜೇಟ್ಲಿ ವೈದ್ಯಕೀಯ ತಪಾಸಣೆಗಾಗಿ ಭಾನುವಾರವೇ ಯುಎಸ್ಗೆ ತೆರಳಿದ್ದಾರೆ. ಕಳೆದ ವರ್ಷ ಮೇ ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಸಹಜ ತಪಾಸಣೆಗೆ ಹೋಗಿದ್ದರೆಂದು ನಂಬಲಾಗಿತ್ತು. ಆದರೆ ಜೇಟ್ಲಿ ಅವರು ಮೃದು ಅಂಗಾಂಶ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿ. ಅವರ ದೇಹದಲ್ಲಿ ಗಡ್ಡೆಯಾಗಿದ್ದು, ಅದು ಇತರ ಭಾಗಗಳಿಗೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಹಾಗಾಗಿ ಫೆ.1ರಂದು ಕೇಂದ್ರ ಸರ್ಕಾರದ ಕೊನೇ ಬಜೆಟ್ನ್ನು ಮಂಡಿಸಲು ಅವರು ಆಗಮಿಸುವುದು ಅನುಮಾನ ಎಂದು ಹೇಳಲಾಗಿದೆ.
Arun Jaitley, New York, Cancer Treatment,