ಬ್ಯಾಂಕ್ ವಂಚನೆ ಪ್ರಕರಣ: ರಾಜಕಾರಣಿಗಳು ಮಾತ್ರವಲ್ಲ ಬ್ಯಾಂಕಿಂಗ್ ನಿಯಂತ್ರಕರೂ ಕಾರಣ: ಜೇಟ್ಲಿ

ನವದೆಹಲಿ:ಫೆ-24: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ರಾಜಕಾರಣಿಗಳು ಮಾತ್ರವಲ್ಲ, ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಹೊಣೆಗಾರರಾಗುತ್ತಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು.

ದೆಹಲಿಯಲ್ಲಿ ನಡೆದ ನಾಲ್ಕನೇ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಭಾರತದಲ್ಲಿ ಸಾಮಾನ್ಯವಾಗಿ ಯಾವುದೇ ದೊಡ್ಡ ವಂಚನೆ ಪ್ರಕರಣ ಬಯಲಿಗೆ ಬಂದರೆ ಮೊದಲಿಗೆ ಸರ್ಕಾರ ಅಥವಾ ರಾಜಕಾರಣಿಗಳನ್ನೂ ದೂರಲಾಗುತ್ತದೆ. ಆದರೆ ಇಂತಹ ಬ್ಯಾಂಕಿಂಗ್ ವಂಚನೆ ಪ್ರಕರಣಗಳಿಗೆ ಬ್ಯಾಂಕಿಂಗ್ ನಿಯಂತ್ರಕರೂ ಕೂಡ ಕಾರಣ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಇತ್ತೀಚೆಗೆ ಕೇಳಿ ಬಂದಿರುವ ಬ್ಯಾಂಕಿಂಗ್ ವಂಚನೆ ಪ್ರಕರಣ ಕುರಿತು ಸರ್ಕಾರ ಗಂಭೀರವಾಗಿದ್ದು, ವಂಚನೆ ಪ್ರಕರಣಗಳಿಂದ ನ್ಯಾಯಸಮ್ಮತ ವಹಿವಾಟುಗಳಿಗೆ ಧಕ್ಕೆಯಾಗುತ್ತದೆ. ಅಲ್ಲದೆ ಜಿಡಿಪಿ ಮೇಲೂ ಹೊಡೆತ ಬೀಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಂಭೀರವಾಗಿದ್ದು, ಬ್ಯಾಂಕಿಂಗ್ ವಂಚನೆ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಮೂರನೇ ಕಣ್ಣಿಡುವ ಅವಶ್ಯಕತೆ ಇದೆ ಎಂದು ಜೇಟ್ಲಿ ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲಿ ಕ್ಯಾಶ್ ಲೆಸ್ ಇಂಡಿಯಾಗಾಗಿ ಸರ್ಕಾರ ಕೈಗೊಂಡ ಮಹತ್ವದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

Arun Jaitley,Global Business Summit, Bank Fraud Case

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ