ನವದೆಹಲಿ: ರಾಜಸ್ತಾನ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕರಿಗೆ ಮಾತ್ರ ಮಣೆ ಹಾಕುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ತಾನದಲ್ಲಿ ಸಂಪುಟ ರಚನೆಗಾಗಿ ಕಸರತ್ತು ಜೋರಾಗಿದೆ. ಈ ಹಿನ್ನಲೆಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಹಲವರು ಲಾಬಿ ನಡೆಸಿದ್ದು, ತಮ್ಮ ಪ್ರಭಾವ ಬಳಸಿಕೊಂಡು ಸಚಿವಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಮಾತ್ರ ಮಣೆಹಾಕಲಾಗುತ್ತದೆ. ಅಲ್ಲದೇ ಕೇವಲ ನಾಮ್ ಕೇ ವಾಸ್ತೆ ಕೆಲಸ ಮಾಡಿ ಇದೀಗ ಪಕ್ಷ ಗೆದ್ದ ಬಳಿಕ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಎಐಸಿಸಿ ಕಾರ್ಯದರ್ಶಿ (ರಾಜಸ್ತಾನ ಉಸ್ತುವಾರಿ) ಅವಿನಾಶ್ ಪಾಂಡೆ ಅವರನ್ನು ವೀಕ್ಷಕರಾಗಿ ರಜಾಸ್ತಾನಕ್ಕೆ ಕಳುಹಿಸಲಾಗಿದ್ದು, ಅವರೊಂದಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರೂ ಕೂಡ ಸಾಥ್ ನೀಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ರಾಜಸ್ಥಾನ ಸಚಿವ ಸಂಪುಟ ರಚನೆ ಕಾರ್ಯ ನಡೆಯಲಿದೆ. ಸಂಪುಟಕ್ಕೆ ಈಗಾಗಲೇ 23 ಸಚಿವರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ್ದು, ಯುವ ಮತ್ತು ಪ್ರಾಮಾಣಿಕ ನಾಯಕ ಮತ್ತು ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
Hardliners will be dealt with strictly, Rahul Gandhi,Congress members