ಲಖನೌ: ಉತ್ತರಪ್ರದೇಶದ ಬುಲಂದ್ ಶೆಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆ ನಿಯಂತ್ರಿಸಲು ವಿಫಲರಾದ ಮೂವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಹೆಚ್ಚುವರಿ ಡಿಜಿ ಎಸ್.ಬಿ.ಶಿರಾಡ್ಕರ್ ಅವರು ಸಲ್ಲಿಸಿದ್ದ ವರದಿಯನ್ನು ಪರಿಶೀಲನೆ ನಡೆಸಿರುವ ಉತ್ತರಪ್ರದೇಶ ಸರ್ಕಾರ, ಸರ್ಕಲ್ ಆಫೀಸರ್ ಸತ್ಯ ಪ್ರಕಾಶ್ ಶರ್ಮಾ, ಛಿಂಗ್ರಾವತಿ ಪೊಲೀಸ್ ಠಾಣಾಧಿಕಾರಿ ಸುರೇಶ್ ಕುಮಾರ್, ಬುಲಂದ್ ಶೆಹರ್ ಹಿರಿಯ ಎಸ್’ಪಿ ಕೃಷ್ಣ ಬಹದ್ದೂರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರಕರಣ ಸಂಬಂಧ ಡಿಜಿಪಿ ಒ.ಪಿ.ಸಿಂಗ್ ಅವರೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು. ಮಾತುಕತೆ ವೇಳೆ ಒ.ಪಿ. ಸಿಂಗ್ ಅವರು ವರದಿಯನ್ನು ಯೋಗಿ ಆದಿತ್ಯನಾಥ್ ಅವರಿಗೆ ನೀಡಿದ್ದು, ವರದಿಯಲ್ಲಿ ಅಧಿಕಾರಿಗಳ ದೋಷಗಳಿರುವ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್ ಅವರು, ಬುಲಂದ್ ಶೆಹರ್ ಹಿಂಸಾಚಾರ ಪ್ರಕರಣ ಆಕಸ್ಮಿಕವಷ್ಟೇ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಕೋಮು ಘರ್ಷಣೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
uttara pradesh,bulandshahar,cm yogi adityanath