ಜೈಪುರ: ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ರಾಜಸ್ಥಾನದ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಪಕ್ಷದ ವಿರುದ್ಧವೇ ಬಂಡಾಯಸಾರಿದ್ದ ಮುಖ್ಯಮಂತ್ರಿ ವಸುಂದರಾ ರಾಜೆ ಸಂಪುಟದ ನಾಲ್ವರು ಸಚಿವರು ಸೇರಿದಂತೆ 11 ರೆಬಲ್ ನಾಯಕರನ್ನು ಬಿಜೆಪಿ ವಜಾಗೊಳಿಸಿದೆ.
ಡಿಸೆಂಬರ್ 7ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಕೆಲ ಹಾಲಿ ಸಚಿವರು, ಶಾಸಕರನ್ನು ಕೈಬಿಟ್ಟು ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಜೆಪಿ ರಾಜ್ಯ ನಾಯಕರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು.
ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡದೇ ಬಂಡಾಯ ಅಭ್ಯರ್ಥಿಗಳು ಪಕ್ಷಕ್ಕೆ ಸೆಡ್ದುಹೊಡೆದು ನಾಲ್ವರು ಸಚಿವರು ಸೇರಿ 11 ಜನರು ನಾಮಪತ್ರ ಸಲ್ಲಿಸಿಲ್ಲದ್ದರು. ಈ ನಿಟ್ಟಿನಲ್ಲಿ ಪಕ್ಷಕ್ಕೆ ಮುಜುಗರವನ್ನುಟ್ಟುಮಾಡಿದ ಆರೋಪ ಹಿನ್ನಲೆಯಲ್ಲಿ 11 ಜನರ ವಿರುದ್ಧವೂ ರಾಜಸ್ಥಾನ ಬಿಜೆಪಿ ಕ್ರಮ ಕೈಗೊಂಡಿದ್ದು, ಅವರನ್ನು ವಜಾಗೊಳಿಸಿದೆ.
ವಜಾಗೊಂಡವರಲ್ಲಿ ಸಚಿವರಾದ ಸುರೇಂದ್ರ ಗೋಯಲ್, ಹೇಮ್ ಸಿಂಗ್, ರಾಜ್ ಕುಮಾರ್ ರಿನ್ವಾ, ಧನ್ ಸಿಂಗ್ ರಾವತ್ ಸೇರಿದಂತೆ 11 ಮಂದಿ ಮುಖಂಡರು ಸೇರಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಟಿಕೆಟ್ ವಂಚಿತರ ಅಸಮಾಧಾನ, ಭಿನ್ನಮತ ತಾರಕಕ್ಕೇರಿದೆ.
Rajasthan assembly election,BJP,11 rebels,suspended