ಮುಂಬೈ: ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಲಾಭವಾಗಿದೆ ಎಂದು ಸಿಬಿಐನ ಮಾಜಿ ಅಧಿಕಾರಿ ಅಮಿತಾಭ್ ಠಾಕೂರ್ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದಿಂದ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಡಿಐಜಿ ಡಿ.ಜಿ. ವಂಜರಾ, ಮಾಜಿ ಎಸ್ಪಿ (ಉದಯಪುರ) ದಿನೇಶ್ ಎಂ.ಎನ್., ಅಹಮದಾಬಾದ್ನ ಮಾಜಿ ಎಸ್ಪಿ ರಾಜ್ಕುಮಾರ್ ಪಾಂಡಿಯನ್ ಮತ್ತು ಅಹಮದಾಬದ್ನ ಮಾಜಿ ಡಿಸಿಪಿ ಅಭಯ್ ಚುಡಾಸ್ಮ ಇವರಿಗೆ ಸಹ ಲಾಭವಾಗಿದೆ ಎಂದು ಠಾಕೂರ್ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿರುವ ಯಾವುದೇ ಪೊಲೀಸ್ ಅಧಿಕಾರಿ ಪ್ರಕರಣದಿಂದ ಏನೂ ಲಾಭ ಪಡೆದಿಲ್ಲ. ಈಗ ಆರೋಪಿ ಸ್ಥಾನದಲ್ಲಿರುವವರಿಗೆ ಸೊಹ್ರಾಬುದ್ದೀನ್ ಕೊಲೆ ಮಾಡಲು ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ. ಎಲ್ಲ 20 ಆರೋಪಿಗಳು ವಂಜರಾ, ಪಾಂಡಿಯನ್, ದಿನೇಶ್, ಚುಡಾಸ್ಮ ನಿರ್ದೇಶನದಂತೆ ನಡೆಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಇದೇವೇಳೆ 22 ಆರೋಪಿಗಳ ಹೆಸರನ್ನು ಪ್ರಕರಣದಲ್ಲಿ ಸೂಚಿಸುವಂತೆ ಅಂದಿನ ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಸೂಚಿಸಿದ್ದರು ಎಂಬುದನ್ನು ಠಾಕೂರ್ ಅಲ್ಲಗಳೆದಿದ್ದಾರೆ. ಸೊಹ್ರಾಬುದ್ದೀನ್ ದೇಹದಲ್ಲಿ 8 ಗುಂಡುಗಳು ಹೊಕ್ಕ ಗುರುತುಗಳಿದ್ದವು ಎಂಬ ಅವರ ಸಹೋದರ ರುಬಾಬುದ್ದೀನ್ ಸಾಕ್ಷ್ಯ ಹೇಳಿದ್ದನ್ನು ಠಾಕೂರ್ ತಿರಸ್ಕರಿಸಿದ್ದಾರೆ. ಸೊಹ್ರಾಬುದ್ದೀನ್ ದೇಹದಲ್ಲಿ ಕೇವಲ ಒಂದೇ ಗುಂಡು ದೊರೆತಿತ್ತು ಎಂದು ಅವರು ಹೇಳಿದ್ದಾರೆ. ಎರಡರಿಂದ ಮೂರು ಗುಂಡುಗಳು ದೇಹದ ಮೂಲಕ ಹಾದುಹೋಗಿದ್ದರೂ ಅವು ಪತ್ತೆಯಾಗಿಲ್ಲ. ಈ ಬಗ್ಗೆ, ಐದು ವರ್ಷಗಳ ನಂತರ ವಿಶೇಷ ತನಿಖಾ ತಂಡ ಇಡೀ ಪ್ರಕರಣವನ್ನು ಮರುಸೃಷ್ಟಿ ಮಾಡಿ ತನಿಖೆ ನಡೆಸಿತ್ತಾದರೂ ಮಾಹಿತಿ ದೊರೆತಿಲ್ಲ ಎಂದೂ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಠಾಕೂರ್ ಅವರು ಸಿಬಿಐನ ಗಾಂಧಿನಗರ ಎಸ್ಪಿಯಾಗಿದ್ದರಲ್ಲದೆ, ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2005ರ ನವೆಂಬರ್ನಲ್ಲಿ ಎನ್ಕೌಂಟರ್ ನಡೆದಿದ್ದು, ಅಮಿತ್ ಶಾ ಆಗ ಗುಜರಾತ್ನ ಗೃಹ ಸಚಿವರಾಗಿದ್ದರು.
Sohrabuddin Encounter Case,Amit Shah, Benefitted Politically And Financially, Says Amitabh Thakur, Former Chief Investigating Officer