
ತುಮಕೂರು: ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಧಾನಿ ಆಗುವ ಅವಕಾಶವನ್ನು ನೆಹರು ಕಸಿದುಕೊಂಡರು ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಬಿಜೆಪಿ ರಾಜಕೀಯ ಇತಿಹಾಸ ಓದಿದರೆ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದರೇ ನೆಹರು ಎಂಬುದು ತಿಳಿಯುತ್ತಿತ್ತು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರು ಕೆಪಿಸಿಸಿ ಕಚೇರಿಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ 70 ವರ್ಷದಲ್ಲಿ ಅಭಿವೃದ್ಧಿ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ದೇಶದ ಅಭಿವೃದ್ಧಿ ದೊಡ್ಡಮಟ್ಟದಲ್ಲಿ ಆಗಿದೆ. ಈ ಅಭಿವೃದ್ಧಿಗೆ ಅಡಿಪಾಯ ಹಾಕಿದವರೇ ನೆಹರು ಅವರು. ಶಿಕ್ಷಣ, ಹಸಿರು ಕ್ರಾಂತಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರವೂ ಮುಂದುವರೆದಿದೆ. ರಾಜಕೀಯ ಇತಿಹಾಸ ತಿಳಿಯದ ಬಿಜೆಪಿ ನೆಹರು ಅವರ ಬಗ್ಗೆ ಅನವಶ್ಯಕ ಟೀಕೆ ಮಾಡುತ್ತಿದ್ದಾರೆ.
ನೆಹರು ಸ್ವಾತಂತ್ರ್ಯ ಸಂದರ್ಭದಲ್ಲಿ ಸಾಕಷ್ಟು ಹೋರಾಟ ಮಾಡಿದವರು. ಅವರು ಪ್ರಧಾನಿಯಾಗಲು ಯಾವುದೇ ಲಾಭಿ ಮಾಡಲಿಲ್ಲ. ಎಲ್ಲರ ಸಹಮತದಿಂದಲೇ ಪ್ರಧಾನಿಯಾಗಿದ್ದಾರೆ. ವಲ್ಲಭಭಾಯಿ ಪಟೇಲ್ ಅವರಿಂದ ಪ್ರಧಾನಿ ಹುದ್ದೆ ಕಸಿದುಕೊಂಡರು ಎಂಬ ಹೇಳಿಕೆಯನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಹಿಂತರುವುದಾಗಿ ಹೇಳಿ ನೋಟು ಅಮಾನ್ಯೀಕರಣ ಮಾಡಿದರು. ಆದರೆ ಇದರ ಲಾಭ ಕೇವಲ ಉದ್ಯಮಿಗಳಿಗೆ ಆಯಿತೇ ವಿನಃ ಜನಸಾಮಾನ್ಯರಿಗಲ್ಲ.ಕಪ್ಪು ಹಣ ಹಿಂತರುವ ಹೇಳಿಕೆಯೂ ಸುಳ್ಳಾಯಿತು. ಇದನ್ನು ಜನಸಾಮಾನ್ಯರು ನೋಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಬಂಧನ ರಾಜಕೀಯ ಪ್ರೇರಿತವಲ್ಲ:
ಜನಾರ್ದನ ರೆಡ್ಡಿ ಬಂಧಿಸಿರುವ ಸಂಬಂಧ ನ್ಯಾಯಾಲಯ ಈಗಾಗಲೇ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕೇಳಿದೆ. ಪೊಲೀಸರು ಸಹ ಸೂಕ್ತ ಆಧಾರವಿಲ್ಲದೇ ಯಾರನ್ನು ಬಂಧಿಸುವುದಿಲ್ಲ. ನ್ಯಾಯಾಲಯಕ್ಕೆ ಪೊಲೀಸರು ಸಮರ್ಥ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಜನಾರ್ದನ ರೆಡ್ಡಿ ಬಂಧನ ರಾಜಕೀಯ ಪ್ರೇರಿತವಲ್ಲ ಎಂದರು.
ಪ್ರಚೋದನಕಾರಿ ಹೇಳಿಕೆ ಸಹಿಸಲ್ಲ:
ಟಿಪ್ಪು ಜಯಂತಿ ಸರಕಾರದ ಕಾರ್ಯಕ್ರಮವಾಗಿದೆ. ಟಿಪ್ಪುಜಯಂತಿ ಅತ್ಯಂತ ಸೂಕ್ಷ್ಮವಾದ್ದರಿಂದ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವವರ ಮೇಲೆ ನಿಗಾ ವಹಿಸುವಂತೆ ನಾನೇ ಸೂಚನೆ ನೀಡಿದ್ದೆ. ಯಾರನ್ನೂ ಉದ್ದೇಶ ಪೂರ್ವಕವಾಗಿ ಬಂಧಿಸಿಲ್ಲ. ಟಿಪ್ಪು ಬಗ್ಗೆ ಟೀಕೆ, ಟಿಪ್ಪಣೆ ವ್ಯಕ್ತಪಡಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರಚೋದನಕಾರಿ ಹೇಳಿಕೆ ಸಹಿಸುವುದಿಲ್ಲ ಎಂದರು.