ಪುಣೆ: ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಸಿಬಿಐ ಭಯೋತ್ಪಾದನಾ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಆರೋಪಿಗಳ ವಿರುದ್ಧ ಟೆರರ್ ಕೇಸ್ ದಾಖಲಿಸಿರುವ ಸಿಬಿಐ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಗೆ ವರದಿ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 15 ಮತ್ತು 16 (ಭಯೋತ್ಪಾದನಾ ಕಾಯ್ದೆ, ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ್ ಕುಮಾರ್ ಧಕಾನೆಯವರು ಹೇಳಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐ ಅಧಿಕಾರಿಗಳಿಗೆ 90 ದಿನಗಳ ಕಾಲಾವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ.
ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಹಿಂದೂ ಜಾಗೃತಿ ಸಮಿತಿ ಸದಸ್ಯರು ಹಾಗೂ ಇಎನ್’ಟಿ ಸರ್ಜನ್ ವೀರೇಂದ್ರಸಿನ್ಹ್ ತಾವ್ಡೆ, ಸಚಿನ್ ಅಂದುರೆ ಹಾಗೂ ಶರದ್ ಕಲಸ್ಕರ್ ಸೇರಿ ಒಟ್ಟು 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ಪುಣೆಯ ಓಂಕಾರೇಶ್ವರ ಸೇತುವೆ ಬಳಿ 2013ರ ಆ.20 ರಂದು ದಾಬೋಲ್ಕರ್ ಅವರು ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅಂದುರೆ ಹಾಗೂ ಕಲಸ್ಕರ್ ದಾಬೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು ಎಂದು ಸಿಬಿಐ ಹೇಳಿದೆ.
Narendra Dabholkar, Murder case, CBI, Terror case