ಧೂಳೆಬ್ಬಿಸಿದ ಕೆಜಿಎಫ್ ಟ್ರೇಲರ್: ನಿರೀಕ್ಷೆ ಮೀರಿದ ಪ್ರತಿಕ್ರಿಯೆಗೆ ಖುಷ್ ಆದ ಯಶ್-ಫೇಸ್ ಬುಕ್ ಮೂಲಕ ಕೃತಜ್ಞತೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಮೊದಲ ಭಾಗದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಅಭಿಮಾನಿಗಳಿಗೆ ಭಾನುವಾರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಯಶ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ.
ಎಲ್ಲಾ ಅಭಿಮಾನಿಗಳಿಗೂ, ಕಲಾಭಿಮಾನಿಗಳಿಗೂ, ಕನ್ನಡಾಭಿಮಾನಿಗಳಿಗೂ ಧನ್ಯವಾದಗಳು. ಕೆಜಿಎಫ್ ಟ್ರೈಲರ್ ಸ್ವೀಕರಿಸಿದ ರೀತಿ ಬಹಳ ಸಂತಸವನ್ನು ತಂದಿದೆ. 2 ವರ್ಷದಿಂದ ನಾವು ಪಟ್ಟ ಶ್ರಮವನ್ನು ನಿಮಗೆ ತೋರಿಸಲು ಪ್ರಯತ್ನಿಸಿದ್ದೆವು. ಟ್ರೈಲರ್ ಮೂಲಕ ಅದನ್ನು ಪ್ರಸ್ತುತ ಪಡಿಸಿದ್ದೇವೆ. ನಮ್ಮ ಶ್ರಮಕ್ಕೆ ಜನರ ಪ್ರತಿಕ್ರಿಯೆ ಹಾಗೂ ಅವರ ಮೆಚ್ಚುಗೆ ನೋಡಿ ಸಾರ್ಥಕತೆ ಸಿಕ್ಕಿದೆ ಎಂದೆನಿಸುತ್ತಿದೆ ಎಂದು ಹೇಳಿದ್ದಾರೆ.
ನಿಮ್ಮ ಅತ್ಯುತ್ತಮ ಪ್ರತಿಕ್ರಿಯೆ ಮತ್ತಷ್ಟು ಹೆಚ್ಚು ಕೆಲಸ ಮಾಡಲು ಹುರುಪು ನೀಡಿದಂತಾಗಿದೆ. ಜನರು ಆನಂದಿಸಿದ ವಿಡಿಯೋಗಳನ್ನು ನೋಡಿದ್ದೇನೆ. ನನಗೂ ಸಂತೋಷವಾಗಿದೆ. ಚಿತ್ರಮಂದಿರದಲ್ಲೂ ಟ್ರೈಲರ್ ನೋಡಿದ್ದೀರಿ. ಬಹಳ ಸಂತೋಷವಾಯಿತು. ನನಗೆ ಶುಭಾಶಯ ಕೋರಿದ ಚಿತ್ರರಂಗದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ