ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಜೊತೆ ಬೆಳ್ಳಿ ಪರದೆ ಹಂಚಿಕೊಳ್ಳುತ್ತಿರುವ ಬೆಡಗಿ ಯಾರು?

ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದ ಅಂತಿಮ ಹಾಡೊಂದನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಿಸಲಾಗುತ್ತದೆ, ರೆಟ್ರೋ ಕಾಲದ ಹಾಡಿಗೆ ಯಶ್ ಗೆಯಾರು ನಾಯಕಿಯಾಗಲಿದ್ದಾರೆ ಎಂಬ ಬಗ್ಗೆ ಹಲವು ಗಾಳಿಸುದ್ದಿಗಳು ಕೇಳಿ ಬಂದಿವೆ. ದಕ್ಷಿಣ ಭಾರತದ ಪ್ರಮುಖ ನಟಿಯರುಗಳಾದ ತಮನ್ನಾ ಭಾಟಿಯಾ, ಕಾಜಲ್ ಅಗರ್ ವಾಲ್, ಲಕ್ಷ್ಮಿ ರೈ, ಮತ್ತು ನೂರ್ ಪಟೇಹಿ ಹೆಸರುಗಳು ಸುಳಿದಾಡುತ್ತಿವೆ.
ದಕ್ಷಿಣದ ಹಲವು ದೊಡ್ಡ ಹೆಸರುಗಳು ಕೇಳಿ ಬಂದಿದ್ದು, ಈಗಾಗಲೇ ಕೆಲವರು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗಿದೆ, ಕೆಲವರ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ,ಇನ್ನೂ ಕೆಲ ದಿನಗಳಲ್ಲಿ ಈ ವಿಷಯ ಫೈನಲ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಯಶ್ ಜೊತೆ ಯಾವ ನಾಯಕಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬುದನ್ನು ಆಗಸ್ಟ್ 7 ರಂದು ತಿಳಿಸುವುದಾಗಿ ಚಿತ್ರ ತಂಡ ತಿಳಿಸಿದೆ. ಸಿನಿಮಾದಲ್ಲಿ ಅತಿಥಿ ಪಾತ್ರದ ಜೊತೆಗೆ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ, ಬಹು ದೊಡ್ಡ ಬಜೆಟ್ ಸಿನಿಮಾವಾಗಿರುವ ಕೆಜಿಎಫ್ ಎಲ್ಲರ ಗಮನ ಕೇಂದ್ರಿಕರಿಸಿದೆ. ಹಲವು ಸ್ಯಾಂಡಲ್ ವುಡ್ ಕಲಾವಿದರು ಬೇರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ತೆರಳುತ್ತಿದ್ದಾರೆ.
ಬಹುಭಾಷಾ ಚಿತ್ರವಾದ ಕೆಜಿಎಫ್ ಸಿನಿಮಾವನ್ನು ಹೊಂಬಾಳೆ ಪಿಲ್ಮ್ ನಿರ್ಮಿಸುತ್ತಿದೆ. 70 ರ ದಶಕದ ವಿಶೇಷ ಕಥೆಯುಳ್ಳ ಸಿನಿಮಾ ಇದಾಗಿದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ರವಿ ಬಸ್ರೂರ್ ಸಂಗಿತ ನೀಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ