ಥಗ್ಸ್ ಆಫ್ ಹಿಂದೂಸ್ತಾನ್, ಸರ್ಕಾರ್ ಬಳಿಕ ರಜನಿಕಾಂತ್ 2.0 ಸೋರಿಕೆ ಮಾಡುವುದಾಗಿ ಬೆದರಿಕೆ?

ನವದೆಹಲಿ: ಈ ಹಿಂದೆ ನಟ ವಿಜಯ್ ಅಭಿನಯದ ಸರ್ಕಾರ್ ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳನ್ನು ಆನ್ ಲೈನ್ ನಲ್ಲಿ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ ತಮಿಳ್ ರಾಕರ್ಸ್ ತಂಡ ಇದೀಗ ಇನ್ನೂ ಬಿಡುಗಡೆಯೇ ಆಗದ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದೆ ಎನ್ನಲಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಪೈರಸಿ ಹಾವಳಿ ಮಿತಿ ಮೀರಿದ್ದು, ಇದೀಗ ನೇರವಾಗಿಯೇ ಹ್ಯಾಕರ್ ಗಳು ಹೊಸ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆ ಚಿತ್ರಗಳ ನಕಲನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ನಟ ವಿಜಯ್ ಅಭಿನಯದ ಸರ್ಕಾರ್ ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳು ಈಗಾಗಲೇ ಆನ್ ಲೈನ್ ನಲ್ಲಿ ಲಭ್ಯವಿದ್ದು, ಇದರ ನಡುವೆಯೇ ಇನ್ನೂ ಬಿಡುಗಡೆಯೇ ಆಗದ ರಜನಿಕಾಂತ್ ಅಭಿನಯದ 2.0 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹ್ಯಾಕರ್ಸ್ ಗಳು ಬೆದರಿಕೆಯೊಡ್ಡಿದ್ದಾರೆ. ತಮಿಳ್ ರಾಕರ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬೆದರಿಕೆ ಒಡ್ಡಲಾಗಿದೆ.

ತಾನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ: ತಮಿಳ್ ರಾಕರ್ಸ್ ಸ್ಪಷ್ಟನೆ
ಇನ್ನು ಸೋರಿಕೆ ಸುದ್ದಿ ಭಾರತೀಯ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿರುವಂತೆಯೇ ಎಚ್ಚೆತ್ತುಕೊಂಡಿರುವ ತಮಿಳ್ ರಾಕರ್ಸ್ ವೆಬ್ ಸೈಟ್ ತಂಡ ತಾನು ಯಾವುದೇ ರೀತಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಹೊಂದಿಲ್ಲ.  ತನ್ನ ಹೆಸರಲ್ಲಿ ಟ್ವಿಟರ್ ಖಾತೆ ಇಲ್ಲ ಎಂದು ತಮಿಳ್ ರಾಕರ್ಸ್‌ನ ಮೂಲ ವೆಬ್‌ ಸೈಟ್ ಸ್ಪಷ್ಟನೆ ನೀಡಿದೆ. ಈ ಬಗ್ಗೆ ತನ್ನ ವೆಬ್ ಸೈಟಿನಲ್ಲೇ ತಂಡ ಸ್ಪಷ್ಟನೆ ನೀಡಿದೆ. ಈ ಘಟನೆ ಬಳಿಕ ಟ್ವಿಟರ್ ಹ್ಯಾಂಡಲ್ ಅನ್ನು ಸ್ಥಗಿತಗೊಳಿಸಲಾಗಿದ್ದರೂ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳು ಹೊಸ ಟ್ವಿಟರ್ ಹ್ಯಾಂಡಲ್ ರೂಪಿಸಿದ್ದಾರೆ.
ನಿರ್ಮಾಪಕರಿಗೆ ತಲೆನೋವು
ಹೊಸದಾಗಿ ಬಿಡುಗಡೆಯಾಗುವ ಸಿನೆಮಗಳನ್ನು ಕದ್ದು ಸೋರಿಕೆ ಮಾಡುವ ವೆಬ್‌ಸೈಟ್‌ಗಳಿಂದ ಸಿನೆಮಾ ನಿರ್ಮಾಪಕರಿಗೆ ಸಮಸ್ಯೆ ಎದುರಾಗಿದೆ. ಇಂತಹ ವೆಬ್‌ಸೈಟ್‌ಗಳ ವಿರುದ್ಧ ಸೆಲೆಬ್ರಿಟಿಗಳು ಹಾಗೂ ಸಿನೆಮಾ ನಿರ್ಮಾಪಕರು ಧ್ವನಿ ಎತ್ತಿದ್ದು ಇವರಿಗೆ ಚಿತ್ರಮಂದಿರಗಳ ಮಾಲೀಕರೂ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ಸಿನೆಮಾ ಮಂದಿರಗಳ ಒಳಗೆ ಸಿಸಿಟಿವಿಗಳನ್ನು ಅಳವಡಿಸುವ ಮೂಲಕ ಸಿನೆಮಾಗಳನ್ನು ರೆಕಾರ್ಡ್ ಮಾಡಿಕೊಳ್ಳುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸಿನೆಮಾಗಳನ್ನು ಕದಿಯುವ ಕೃತ್ಯದಲ್ಲಿ ಶಾಮೀಲಾಗಿರುವ ಕೆಲವು ಸಿನೆಮಾ ಮಂದಿರಗಳನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ