ಗಗನ ಕುಸುಮವಾಗಲಿದೆಯೇ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ…?

ಬೆಂಗಳೂರು, ನ.11- ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಬಹುಶಃ ಗಗನ ಕುಸುಮವಾಗಲಿದೆ. ಪಂಚರಾಜ್ಯಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡಲು ಹೈಕಮಾಂಡ್ ಮುಂದಾಗಿದೆ.

ಸಚಿವಾಕಾಂಕ್ಷಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಉಪಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ನಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದು, ದೆಹಲಿಗೆ ತೆರಳಲು ಮುಂದಾಗಿದ್ದವರಿಗೆ ನ.26ರ ವರೆಗೆ ಯಾರೂ ದೆಹಲಿ ಕಡೆ ತಲೆ ಹಾಕುವುದು ಬೇಡ ಎಂದು ಹೈಕಮಾಂಡ್ ನಾಯಕರು ಖಡಕ್ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಸದ್ಯಕ್ಕೆ ನಡೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಹೈಕಮಾಂಡ್ ವರಿಷ್ಠರು ಪಂಚ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ಅವರಿಗೆ ಇದ್ದಂತಿಲ್ಲ. ಹಾಗಾಗಿ ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಚಿಂತನೆ ನಡೆಸೋಣ ಎಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ನಿರಾಸೆ ಮೂಡಿದೆ.

ನವೆಂಬರ್ ತಿಂಗಳು ಕಳೆದರೆ ಡಿಸೆಂಬರ್‍ನಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತದೆ. ಅಧಿವೇಶನ ಮುಗಿದ ಮೇಲೆ ಸಂಪುಟ ವಿಸ್ತರಣೆ ಮಾಡೋಣ ಎಂಬ ಮತ್ತೊಂದು ಕಾರಣ ಹೇಳುವ ಸಾಧ್ಯತೆ ಇದೆ. ಫೆಬ್ರವರಿ ನಂತರ ಲೋಕಸಭೆ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಕಡಿಮೆ. ಹಾಗಾಗಿ ಬಹುತೇಕ ಲೋಕಸಭೆ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ನಡೆಯುವ ಸಾಧ್ಯತೆ ಕ್ಷೀಣ ಎಂದೇ ಹೇಳಲಾಗುತ್ತಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಕೂಡ ತಂದಿದ್ದರು. ಕಾಂಗ್ರೆಸ್ ಪಾಲಿನ ಆರು ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಿದ್ದರು. ಆದರೆ, ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಈಗ ಅದರ ಗೊಡವೆಗೆ ಹೋಗುವುದು ಬೇಡ ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಂತಿದೆ.

ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಮತ್ತಷ್ಟು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳಲಾಗಿದೆ. ಮಂಡ್ಯ, ಬಳ್ಳಾರಿ, ರಾಮನಗರ, ಶಿವಮೊಗ್ಗ, ಜಮಖಂಡಿ ಉಪಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಚುನಾವಣಾ ಗೆಲುವಿಗೆ ಕಾರಣರಾದವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಶಾಸಕರುಗಳು ಟೊಂಕ ಕಟ್ಟಿ ನಿಂತು ಚುನಾವಣೆಗೆ ಸಹಕರಿಸಿದ್ದರು. ಗೆಲುವು ಕೂಡ ತಂದುಕೊಟ್ಟಿದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ಬೇರೆಯದೆ ಕಾರಣ ಹೇಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಆಕಾಂಕ್ಷಿಗಳು ಮತ್ತೆ ಪರಿತಪಿಸುವಂತಾಗಿದೆ.

ಸಚಿವಾಕಾಂಕ್ಷಿಗಳಾಗಿದ್ದ ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ತುಕಾರಾಂ, ನಾಗೇಂದ್ರ, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ.ನಾಗರಾಜ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರು ಈಗಾಗಲೇ ದೆಹಲಿ ಮಟ್ಟದಲ್ಲಿ ಲಾಬಿ ಕೂಡ ನಡೆಸಿದ್ದರು.
ರಮೇಶ್ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಈ ಹಿಂದೆ ವಾರಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಸಂಪುಟ ವಿಸ್ತರಣೆ ಹಲವಾರು ಬಾರಿ ಹಲವಾರು ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ