ನವದೆಹಲಿ: ಮುಂಬೈ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಸತತ ಎರಡನೇ ದಿನವೂ ಕುಸಿತ ದಾಖಲಾಗಿದ್ದು ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 2.72 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ.
ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ಇ ಸೂಚ್ಯಾಂಕ ಸುಮಾರು 800 ಅಂಕಗಳ ಕುಸಿತ ದಾಖಲಿಸಿದೆ. ಸೋಮವಾರ 505 ಪಾಯಿಂಟ್ ಕುಸಿತ ಕಂಡು 37,585.51ಕ್ಕೆ ತಲುಪಿದ್ದ ಸೂಚ್ಯಾಂಕ ಮಂಗಳವಾರ ಸಹ 295 ಪಾಯಿಂಟ್ ಕುಸಿತದೊಡನೆ 37,290 ಗೆ ತಲುಪಿದೆ.
ಷೇರುಗಳ ತೀವ್ರ ಕುಸಿತದಿಂದಾಗಿ, ಬಿಎಸ್ಇ ಪಟ್ಟಿಯಲ್ಲಿರುವ ಕಂಪನಿಗಳ ಮಾರುಕಟ್ಟೆಯ ಬಂಡವಾಳವು ರೂ 2,72,549.15 ಕೋಟಿಯಿಂದ 1,53,64,470 ಕೋಟಿ ರೂ.ಗೆ ಇಳಿದಿದೆ.
ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ವಾಣಿಜ್ಯ ಸಮರಗಳ ಕಾರಣ ಷೇರು ವಹಿವಾಟಿನಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಯುಎಸ್ ಮತ್ತು ಚೀನಾ ನಡುವಿನ ವ್ಯವಹಾರ ಸುಂಕದ ಕ್ಕಟ್ಟಿನಿಂದಾಗಿ ಮತ್ತು ರೂಪಾಯಿ ಮೌಲ್ಯ ಇಳಿಕೆ ಈ ಎಲ್ಲವೂ ಹೂಡಿಕೆದಾರರ ಭಾವನೆಗಳ ಮೇಲೆ ಪ್ರಭಾವ ಬೀರಿದೆ.
ಎಸ್ಬಿಐ, ಟಾಟಾ ಮೋಟಾರ್ಸ್, ಬಜಾಜ್ ಆಟೋ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿ 24 ಷೇರುಗಳು ಭಾರೀ ಕುಸಿತ ದಾಖಲಿಸಿದೆ.
ಇಂದಿನ ವಹಿವಾಟಿನಲ್ಲಿ ಬಿಎಸ್ಇದಲ್ಲಿ 1,805 ಷೇರುಗಳು ಕುಸಿತ ದಾಖಲಿಸಿದರೆ 881 ಷೇರುಗಳು ಏರುಗತಿ ಕಂಡಿದೆ.ಮತ್ತು 162 ಷೇರುಗಳು ಸ್ಥಿರವಾಗಿ ಉಳಿದಿದೆ.