15 ದಿನದೊಳಗೆ ಬೇಡಿಕೆ ಈಡೇರಿಸುವಂತೆ ಓಲಾ ಊಬರ್ ಟ್ಯಾಕ್ಸಿ ಮತ್ತು ಆಟೋ ಚಾಲಕರ ಆಗ್ರಹ

ಬೆಂಗಳೂರು, ಸೆ.18- ತಮ್ಮ ಬೇಡಿಕೆಗಳನ್ನು ರಾಜ್ಯಸರ್ಕಾರ 15 ದಿನದೊಳಗೆ ಈಡೇರಿಸದಿದ್ದರೆ ಅನ್ಯ ಮಾರ್ಗವಿಲ್ಲದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಓಲಾ ಊಬರ್ ಟ್ಯಾಕ್ಸಿ ಮತ್ತು ಆಟೋ ಚಾಲಕರು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿವಿಧ ವಾಹನ ಚಾಲಕರ ಸಂಘಗಳ ಮುಖಂಡರು ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಓಲಾ ಊಬರ್ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಜಾತಿವಾರು ನಿಗಮ ಮಂಡಳಿಗಳಿಂದ ನೇರ ಸಾಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದೇವೆ ಎಂದರು.

ಬೆಂಗಳೂರು ನಗರದಲ್ಲಿ ಸುಮಾರು 80 ಸಾವಿರ ಚಾಲಕರು ಕಾರ್ಯನಿರ್ವಹಿಸುತ್ತಿದ್ದು, ಈ ಚಾಲಕರಲ್ಲಿ ಹಲವರು ಅನಿವಾರ್ಯವಾಗಿ ಮೀಟರ್ ಬಡ್ಡಿ ದಂಧೆಕೋರರಿಂದ ಸಾಲ ಪಡೆದು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸುರಕ್ಷತೆಗಾಗಿ ನಿಗಮ ಮಂಡಳಿಗಳ ಮೂಲಕ ಸಾಲ ಸೌಲಭ್ಯ ಒದಗಿಸಬೇಕು. ವಿವಿಧ ಕಂಪೆನಿಗಳಿಗೆ ಕಾರ್ಯನಿರ್ವಹಿಸುತ್ತಿರುವ ಚಾಲಕರಿಗೆ ಕಂಪೆನಿಗಳಿಂದಲೇ ಕಿರುಕುಳ ಎದುರಾಗುತ್ತಿದೆ. ಪ್ರಯಾಣಿಕರ ದೂರನ್ನೇ ಪರಿಗಣಿಸಿ 4 ಸಾವಿರಕ್ಕೂ ಅಧಿಕ ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇಂತಹ ಸಮಸ್ಯೆಗಳಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಸರ್ಕಾರ ಕಂಪೆನಿಯವರಿಗೆ ನಿಗದಿಪಡಿಸಿರುವ ಪ್ರತಿ ಕಿಮೀಗೆ 24 ರೂ.ಗಳನ್ನು ಕಡ್ಡಾಯವಾಗಿ ಚಾಲಕರಿಗೆ ನೀಡಬೇಕು. ಚಾಲಕರ ಮೇಲೆ ಸಾರಿಗೆ ಹಾಗೂ ಸಂಚಾರಿ ಪೆÇಲೀಸರಿಂದ ನಡೆಯುತ್ತಿರುವ ಕಿರುಕುಳ ನಿಯಂತ್ರಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಲಾಗಿದೆ. ಆದರೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ವಿಳಂಬ ಮಾಡಿದಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಚಾಲಕರ ಒಕ್ಕೂಟದ ಗಂಡಸಿ ಸದಾನಂದಸ್ವಾಮಿ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಎಂ.ಮಂಜುನಾಥ್, ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘಸಂಸ್ಥೆಗಳ ಎಂ.ಎನ್.ವೇಣುಗೋಪಾಲ್, ವಾಹನ ಚಾಲಕರ ಒಕ್ಕೂಟದ ಸದಸ್ಯರು, ಕರ್ನಾಟಕ ಚಾಲಕರ ಸೇನೆಯ ಎಸ್.ಶಬರಿ, ನಮ್ಮ ಚಾಲಕರ ಟ್ರೇಡ್ ಯೂನಿಯನ್‍ನ ಸೋಮಶೇಖರ್, ಎಚ್‍ಡಿಕೆ ಯುವಶಕ್ತಿ ರಕ್ತದಾನಿ ಬಳಗದ ಕಿರಣ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ