ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್, ಮುಂದುವರೆದ ಭಾರತೀಯ ಷೇರುಮಾರುಕಟ್ಟೆ ನಾಗಾಲೋಟ

ಮುಂಬೈ: ಎರಡು ದಿನಗಳ ರಜೆ ಬಳಿಕ ಭಾರತೀಯ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದು, ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆಯ ಅಂಶಗಳ ಏರಿಕೆ ಮೂಲಕ ನೂತನ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ.
ಬಿಎಸ್ ಇ ಸೆನ್ಸೆಕ್ಸ್ ಇಂದು ಬೆಳಗ್ಗೆ 250 ಅಂಕಗಳ ಏರಿಕೆ ಕಾಣುವ ಮೂಲಕ ಇದೇ ಮೊದಲ ಬಾರಿಗೆ 38,200ರ ಗಡಿದಾಟಿದ್ದು, ಎನ್ ಎಸ್ ಇ ನಿಫ್ಟಿ ಕೂಡ ಇದೇ ಮೊದಲ ಬಾರಿಗೆ 11, 500 ಅಂಕಗಳಿಗೇರಿದೆ. ಸೆನ್ಸೆಕ್ಸ್ 263.03 ಅಂಕಗಳು (0.69 %) ಏರಿಕೆಯಾಗಿ 38,210.94 ಅಂಕಗಳಿಗೆ ತಲುಪಿದ್ದು ದಾಖಲೆಯಾಗಿದೆ. ಈ ಹಿಂದೆ ಆಗಸ್ಟ್ 9 ರಂದು ಸೆನ್ಸೆಕ್ಸ್ 38,076.23 ಅಂಕ ತಲುಪಿದ್ದು ದಾಖಲೆಯಾಗಿತ್ತು. ಶುಕ್ರವಾರ ಸೆನ್ಸೆಕ್ಸ್ ನಲ್ಲಿ 284.32 ಅಂಕಗಳು ಏರಿಕೆಯಾಗಿದ್ದವು.
ಇನ್ನು ರಾಷ್ಟ್ರೀಯ  ಷೇರು ಸೂಚ್ಯಂಕ ನಿಫ್ಟಿ ಕೂಡ ಏರಿಕೆ ಕಂಡಿದ್ದು, ಇಂದು 46.50 ಅಂಕ ಅಂದರೆ 0.40 % ಏರಿಕೆಯಾಗುವ ಮೂಲಕ 11,517.25 ಅಂಕಕ್ಕೆ ತಲುಪಿದೆ. ಇಂದಿನ ವಹಿವಾಟಿನಲ್ಲಿ ಬಂಡವಾಳ ಸರಕುಗಳು, ಲೋಹಗಳು, ಸಿರಾಸ್ಥಿ ಹಾಗೂ ಬ್ಯಾಂಕಿಂಗ್ ವಲಯಗಳ  ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಕೋಲ್ ಇಂಡಿಯಾ, ಲಾರ್ಸನ್ ಅಂಡ್ ಟರ್ಬೋ. ಒಎನ್ ಜಿಸಿ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ