ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದು, ಚೀನಾ ಮಾರ್ಗವಾಗಿ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಯಾತ್ರೆ ಕುರಿತು ಟೀಕಿಸಿರುವ ಬಿಜೆಪಿಗೆ ಪ್ರತಿಕ್ರಿಯೆ ಎಂಬಂತೆ, ಉತ್ತರಿಸಿರುವ ರಾಹುಲ್ ಗಾಂಧಿ ’ಅಸತೋಮಾ ಸದ್ಗಮಯಾ’ ಎಂಬ ಪ್ರಾರ್ಥನೆಯ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಯಲ್ಲಿ ಇಳಿಯುವಾಗ ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಎಡಭಾಗಕ್ಕೆವಾಲಿತ್ತು. ಆಗ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಮಾನಸ ಯಾತ್ರೆ ಕೈಗೊಳ್ಳುವುದಾಗಿ ಸಂಕಲ್ಪ ಮಾಡಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿಯವರ ಯಾತ್ರೆ ಕುರಿತಂತೆ ಲೇವಡಿ ಮಾಡಿದ್ದ ಬಿಜೆಪಿ, ಚೀನಾ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವ ರಾಹುಲ್, ಚೈನೀಸ್ ಮ್ಯಾನ್ ಆಗಿದ್ದಾರೆಂದು ಹೇಳಿತ್ತು. ಅಲ್ಲದೆ, ನೀವು ಚೈನೀಸ್ ಗಾಂಧಿಯೋ, ರಾಹುಲ್ ಗಾಂಧಿಯೋ ಎಂದು ಪ್ರಶ್ನಿಸಿತ್ತು.
ಬಿಜೆಪಿಯ ಟೀಕೆಗೆ ಉತ್ತರವೆಂಬಂತೆ ಅಸತೋಮಾ ಸದ್ಗಮಯಾ ಶ್ಲೋಕವನ್ನು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಟ್ವೀಟ್ ನಲ್ಲಿ ಭಗವಾನ್ ಶಿವನ ಪವಿತ್ರ ದಿವ್ಯ ಸನ್ನಿಧಿಯ ತಾಣವಾಗಿರುವ ಕೈಲಾಸ ಪರ್ವತದ ಚಿತ್ರವನ್ನು ಕೂಡ ಹಾಕಿದ್ದಾರೆ.
ರಾಹುಲ್ ನೇಪಾಲದ ಕಾಠ್ಮಂಡುವಿನಿಂದ ವಿಮಾನದಲ್ಲಿ ನೇಪಾಲ್ಗಂಜ್ಗೆ ಪ್ರಯಾಣಿಸಿ ಅಲ್ಲಿಂದ ಟಿಬೆಟ್ ಗಡಿ ಸಮೀಪದಲ್ಲಿರುವ ಹಮ್ಲಾ ತಾಣಕ್ಕೆ ವಾಯು ಮಾರ್ಗವಾಗಿ ಪ್ರಯಾಣಿಸುವರು ಎಂದು ಹೇಳಲಾಗಿದೆ.
Rahul gandhi,kailash-mansarovar,asatoma sadgamaya