
ಜಕಾರ್ತಾ: ಏಷ್ಯನ್ ಗೇಮ್ಸ್ 18ನೇ ಆವೃತ್ತಿಯಲ್ಲಿ ಭಾರತ ಪದಕ ಬೇಟೆ ನಿರಾತಂಕವಾಗಿ ಸಾಗಿದ್ದು ಕ್ರೀಡಾಕೂಟದ 13ನೇ ದಿನವಾದ ಇಂದು ಸಹ ಸೇಲಿಂಗ್ (ನೌಕಾಯಾನ) ವಿಭಾಗದಲ್ಲಿ ಭಾರತ 2 ಬೆಳ್ಳಿ 1 ಕಂಚಿನ ಪದಕ ಗಳಿಸಿದೆ.
ವರ್ಷಾ ಗೌತಮ್ ಮತ್ತು ಶ್ವೇತಾ ಶೇರ್ವಗರ್ ಸೇಲಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದರೆ ಸೇಲಿಂಗ್ ಮಿಶ್ರ ಓಪನ್ ನಲ್ಲಿ ಭಾರತದ ಹರ್ಷಿತಾ ತೋಮರ್ ಕಂಚು ಗೆದ್ದಿದ್ದಾರೆ.
ಶುಕ್ರವಾರ ನಡೆದ ಮಹಿಳಾ ವಿಭಾಗದ ಸೇಲಿಂಗ್ ಪಂದ್ಯದಲ್ಲಿ ವರ್ಷಾ ಮತ್ತು ಶ್ವೇತಾ ಜೋಡಿ 40 ನೆಟ್ ಪಾಯಿಂಟ್ ಗಳಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.
ಇದೇ ವೇಳೆ ಸೇಲಿಂಗ್ ಮಿಶ್ರ ಓಪನ್ ಲೇಸರ್ 4.7 ವಿಭಾಗದಲ್ಲಿ ಹರ್ಷಿತಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದೀಗ ಭಾರತ ಈ ಕ್ರೀಡಾಕೂಟದಲ್ಲಿ ಒಟ್ಟಾರೆ 62 ಪದಕ ಗಳಿಸಿದ್ದು 8ನೇ ಸ್ಥಾನದಲ್ಲಿದೆ.
ಸೇಲಿಂಗ್: ವರುಣ್-ಗಣಪತಿ ಜೋಡಿಗೆ ಕಂಚು
ಇಂದು (ಶುಕ್ರವಾರ) ನಡೆದ ಸೇಲಿಂಗ್ ಪುರುಷರ ಸ್ಪರ್ಧೆಯಲ್ಲಿ ಭಾರತದ ವರುಣ್ ಠಾಕರ್ ಮತ್ತು ಗಣಪತಿ ಚೆಂಗಪ್ಪ ಕಂಚಿನ ಪದಕ ಗಳಿಸಿದ್ದಾರೆ.
ಪುರುಷರ ಸೇಲಿಂಗ್ 49er ವಿಭಾಗದಲ್ಲಿ ಈ ಜೋಡಿ ಕಂಚು ಗಳಿಸಿಕೊಂಡಿದೆ.