ಚಿನ್ನ ಗೆಲ್ಲುವ ಮೊದಲು ನಾನು ಎಸ್ಎಲ್ ಭೈರಪ್ಪನವರ ಕಾದಂಬರಿಯನ್ನು ಓದಿದ್ದೇ: ರಾಹಿ ಸರ್ನೊಬಾತ್

ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆದ 2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಬ್ಯಾಟಿಂಗ್ ಮುನ್ನ ಮೈದಾನದಲ್ಲಿ ಪುಸ್ತಕವನ್ನು ಓದುತ್ತಿದ್ದರು. ಅದೇ ರೀತಿ ರಾಹಿ ಸರ್ನೊಬಾತ್ ಸಹ ಶೂಟಿಂಗ್ ಮುನ್ನ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ರಾಹಿ ಸರ್ನೊಬಾತ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ರಾಹಿ ಸರ್ನೊಬಾತ್ ಅವರು ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ಬೀಗಿದ್ದರು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ರಾಹಿ ಸರ್ನೊಬಾತ್ ಅವರಿಗೆ ಕನ್ನಡದ ಖ್ಯಾತ ಕಾದಂಬರಿಕಾರ ಎಸ್ಎಲ್ ಭೈರಪ್ಪ ಅವರ ಕಾದಂಬರಿಗಳೆಂದರೆ ಅಚ್ಚುಮೆಚ್ಚಂತೆ. ಹೌದು ರಾಹಿ ಅವರು ಜಕಾರ್ತದಲ್ಲಿ ಬಿಡುವಿನ ಸಮಯದಲ್ಲಿ ಭೈರಪ್ಪನವರ ಪ್ರಸಿದ್ಧ ಕಾದಂಬರಿ ಮಂದ್ರ ಮರಾಠಿ ಅನುವಾದಿತ ಕಾದಂಬರಿಯನ್ನು ಓದುತ್ತಿದ್ದರಂತೆ.
ಕ್ರೀಡಾಕೂಟಕ್ಕೆ ಬರುವಾಗ ನಾನು ನನ್ನೊಂದಿಗೆ ನಾಲ್ಕು ಕಾದಂಬರಿಗಳನ್ನು ತಂದಿದ್ದೆ. ಮೊನ್ನೆ ಸ್ಪರ್ಧೆ ನಡೆಯುವ ಕೆಲವೇ ಕ್ಷಣಗಳ ಮುನ್ನ ನಾನು ಮಂದ್ರ ಕಾದಂಬರಿಯನ್ನು ಓದಿದ್ದೇ ಎಂದು ರಾಹಿ ಹೇಳಿದ್ದಾರೆ.
ಭೈರಪ್ಪನವರು ಮಾನವೀಯ ಸಂಬಂಧಗಳು ಮತ್ತು ತತ್ವಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಿ ಕಾದಂಬರಿಗಳನ್ನು ಬರೆಯುತ್ತಾರೆ. ಹೀಗಾಗಿ ನನಗೆ ಅವರ ಕಾದಂಬರಿಗಳು ಅಂದರೆ ಇಷ್ಟ. ಈಗ ಮೂರು ದಿನಗಳ ಬಿಡುವು ಇದೆ. ನನ್ನ ಕೋಣೆಯಲ್ಲಿ ಕುಳಿತು ಓದು ಮುಂದುವರಿಸುತ್ತೇನೆ ಎಂದು ರಾಹಿ ಹೇಳಿದ್ದಾರೆ.
ಇನ್ನು ಕನ್ನಡವೇ ಗೊತ್ತಿಲ್ಲದ ಪುಣೆ ಮೂಲದ ರಾಹಿ ಸರ್ನೋಬಾತ್ ಕನ್ನಡದ ಖ್ಯಾತ ಲೇಖಕರ ಅನುವಾದಿತ ಕಾದಂಬರಿಗಳನ್ನು ಓದಿ ಅದರಿಂದ ಸ್ಫೂರ್ತಿ ಪಡೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ