ಸಮ್ಮಿಶ್ರ ಸರ್ಕಾರ ಬಿದ್ದರ ಬಿಜೆಪಿ ಹೊಣೆಯಲ್ಲ: ಯಡಿಯೂರಪ್ಪ

ಬೆಂಗಳೂರು:ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ ಆದರೆ ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಮಾಜಿ‌ ಸಚಿವ ಬಾಬುರಾವ್ ಚಿಂಚನಸೂರ್ ಹಾಗು ಪತ್ನಿ ಅಮರೇಶ್ವರಿಬಾಬು ಚಿಂಚನಸೂರ್ ಇಂದು ಬಿಜೆಪಿ ಪಕ್ಷ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಿಂಚನಸೂರು ದಂಪತಿಗೆ ಪಕ್ಷದ ಶಾಲು ನೀಡಿ‌ ಸ್ವಾಗತಿಸಿದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಈ ಸರ್ಕಾರ ಇದೆ ಎಂದು ಯಾರಿಗೂ ಅನ್ನಿಸುತ್ತಿಲ್ಲ, ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, 13 ಜಿಲ್ಲೆಗಳಲ್ಲಿ ಭೀಕರ ಬರ ಎದುರಾಗಿದೆ, ಉಳಿದ‌ಕಡೆ ಅತಿವೃಷ್ಠಿ ಸಂಕಷ್ಟ ಎದುರಾಗಿದೆ ಆದರೆ ವಿಧಾನಸೌಧದಲ್ಲಿ ಸಂಪುಟ ಸದಸ್ಯರು ಸಿಗದ ಪರಿಸ್ಥಿತಿ ಇದೆ,ರಾಜ್ಯದಲ್ಲಿ ಓಡಾಡಿ ಸಮಸ್ಯೆ ಆಲಿಸುತ್ತಿಲ್ಲ, ವಿಧಾನಸೌಧದಲ್ಲೂ ಸಿಗುತ್ತಿಲ್ಲ ಎಂದು ವಾಗ್ದಳಿ ನಡೆಸಿದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಸಿಎಂ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ, ಗೊಂದಲ ಸೃಷ್ಠಿಯ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ.ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.ಇಂತಹ ಗೊಂದಲದ ನಡುವೆ ಯಾವುದೇ ಹೇಳಿಕೆ‌ ಕೊಡಬಾರದು ಎಂದು ನಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದೇನೆ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ‌.ಅವರಾಗಿಯೇ ಕುಸಿದು ಬಿದ್ದರೆ ಅದಕ್ಕೆ ನಾವು ಜವಾಬ್ದಾರಿ ಅಲ್ಲ ಎಂದರು.

ಮಡಿಕೇರು ತಾಲೂಕು ಅತಿವೃಷ್ಠಿಯಿಂದ ಕಷ್ಟದಲ್ಲಿದೆ, ದೊಡ್ಡ ಪ್ರಮಾಣದನ ನೆರವು ಮಠಾಧೀಶರು,ಜನರು ನೀಡಿದ್ದಾರೆ.ನಮ್ಮ ಶಾಸಕರು,ಸಂಸದರು ಒಂದು ತಿಂಗಳ ವೇತನವನ್ನು ಸಿಎಂ ನಿಧಿಗೆ ನೀಡಿದ್ದಾರೆ.ಗಾಳಿಬೀಡು ಪಂಚಾಯತ್ ನ ಮಂಡಗೇರಿ‌ಗ್ರಾಮ‌ ಸಂಪೂರ್ಣ ನಾಶವಾಗಿದೆ 250 ಕುಟುಂಬ ಬೀದಿಗಳಲ್ಲಿದೆ. ಹೆಬ್ಬೆಟ್ಟಗೆರೆ,ಉದಯಗಿರಿ,ಜೋಲಕುಪಾಲು ಗ್ರಾಮದ ಮನೆಗಳು ಸಂಪೂರ್ಣ ನೆಲಸಮವಾಗಿವೆ, ಮಧ್ಯಮವರ್ಗದ ಜನರೇ ಇರುವ ಮುಕ್ಕೋಟು,ಕಾಲೋರು,ಮೂಬತ್ತು ಒಕ್ಕಲು,ಕರವಾಲೆ ಸಂಪೂರ್ಣ ನಾಶವಾಗಿದೆ, ಹತ್ತು ಲಕ್ಷದಿಂದ 50 ಲಕ್ಷದವರೆಗರ ಖರ್ಚು ಮಾಡಿ ಕಟ್ಟಿದ್ದ ಮನೆಗಳ ಗುರುತೇ ಸಿಗುತ್ತಿಲ್ಲ.ರಾಮಚಂದ್ರಾಪುರ ಮಠ ಹಾಗು ಸರ್ಕಾರ ತಲಾ ಒಂದು ಗೋಶಾಲೆ, ತೆರೆದಿದೆ,ಇನ್ನೂ ಅಗತ್ಯವಿದೆ,ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ಕೋಟಿ ಸರ್ಕಾರದಿಂದ 7 ಕೋಟಿ ರೂ.ಗಳನ್ನು ಸೈನಿಕರ ಕಲ್ಯಾಣ ನಿಧಿಯಿಂದ ಘೋಷಿಸಿದ್ದಾರೆ.ನಾವು ಕೂಡ ಹೆಚ್ಚಿನ ಪರಿಹಾರಕ್ಕಾಗಿ ಪ್ರಧಾನಿಗೆ ಮನವಿ ಮಾಡಿದ್ದೇವೆ.ಮೂರ್ನಾಲ್ಕು ದಿನದಲ್ಲಿ‌ ಅನುದಾನ ಬಿಡುಗಡೆ ಸಾಧ್ಯತೆ ಇದೆ ಎಂದರು.

ನೆರೆಪೀಡಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ, ಎಸ್ಟಿಮೇಟ್,ಪ್ಲಾನ್ ಅನ್ನದೇ ತ್ವರಿತವಾಗಿ ಅಭಿವೃದ್ಧಿ ಕಾರ್ಯ ನಡೆಸಬೇಕು, ಬಟ್ಟ ಬೆರೆ ಇತರೆ ಸಾಮಗ್ರಿಗಳು ಸಾಕು ಅಲ್ಲಿ ಈಗ ಹಣ ಬೇಕಿದ್ದ ಹಾಗಾಗಿ ಕೈಲಾದ ಆರ್ಥಿಕ ನೆರವನ್ನು ನೀಡಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ನ ಪ್ರಭಾವಿ ಮುಖಂಡರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ,ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅವರೆಲ್ಲಾ ಒಬ್ಬೊಬ್ಭೊರಾಗಿಯೇ ಬಿಜೆಪಿಗೆ ಬರಲಿದ್ದಾರೆ ಎಂದು ಯಡಿಯೂರಪ್ಪ ಮತ್ತಷ್ಟು ಕೈ ನಾಯಕರು ಕಮಲ‌ಮುಡಿಯುವ ಸುಳಿವು ನೀಡಿದರು.

ನನ್ನ ಫೋನ್ ಸೇರಿದಂತೆ ಬಹಳಷ್ಟು ಜನರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ.ಈ ಹಿಂದೆಯೇ ಇದರ ಬಗ್ಗೆ ಪ್ರಸ್ತಾಪಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ,ಕೂಡಲೇ ಸರ್ಕಾರ ಇದನ್ನು ನಿಲ್ಲಿಸಬೇಕು ಫೋನ್ ಕದ್ದಾಲಿಕೆ ಸಂಬಂಧ ತನಿಖೆ ನಡೆಸಬೇಕು ಇಲ್ಲದೇ ಇದ್ದಲ್ಲಿ ಹಿಂದೆ ಆದ ಘಟನೆ ಮರುಕಳಿಸಲಿದೆ ಎಂದು ರಾಮಕೃಷ್ಣ ಹೆಗಡೆ ಸರ್ಕಾರ ಪತನಗೊಂಡ ಪರಿಸ್ಥಿತಿ ಕುಮಾರಸ್ವಾಮಿ ಸರ್ಕಾರಕ್ಕೆ ಬರಲಿದೆ ಎನ್ನುವ ಎಚ್ಚರಿಕೆ ನೀಡಿದರು.

ಬಿಜೆಪಿ ಸೇರಿದ ನಂತರ ಮಾತನಾಡಿದ ಬಾಬೂರಾವ್ ಚಿಂಚನಸೂರು,ಕುತಂತ್ರದಿಂದ ನನ್ನನ್ನು ಈ ಬಾರಿ ಸೋಲಿಸಿದರು.ಕಿತ್ತೂರು ಚೆನ್ನಮ್ಮನ ಸೋಲಿಸಿದಂತ ನಮ್ಮವರೇ ನಮ್ಮನ್ನು ಸೋಲಿಸಿದರು.ನನ್ನ ಸೋಲಿಗೆ ಬಿಜೆಪಿ,ದಳ ಕಾರಣವಲ್ಲ ಐದು ಬಾರಿ ಗೆದ್ದಿದ್ದ ನನ್ನ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ನವರೇ ನನ್ನನ್ನು ಸೋಲಿಸಿದರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶೇ.46 ಜನ ನಮ್ಮ ಸಮುದಾಯದವರಿದ್ದಾರೆ. ಒಗ್ಗಟ್ಟಾಗಿ ನಿಲ್ಲಲಿದ್ದೇವೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದು ಯಡಿಯೂರಪ್ಪಗೆ ವಚನ ನೀಡುತ್ತಿರುವುದಾಗಿ ತಿಳಿಸಿದರು.

ಮಾಲೀಕಯ್ಯ‌ಗುತ್ತೇದಾರ್ ಮಾತನಾಡಿ,ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಸೋಲಿಸಿದ್ದಾರೆ.ಕಪ್ಪುಚುಕ್ಕೆ ಇಲ್ಲದ ನಮ್ಮನ್ನು ಜನಪ್ರಿಯತೆ ನೋಡಿ ನಮ್ಮನ್ನಿ ಸೋಕಿಸಬೇಕು ಅಂತಾ ಸೋಲಿಸಿದರು ,ಸ್ವಾರ್ಥದಲ್ಲೇ ಪಕ್ಷ ನಡೆಯಬೇಕು ಎನ್ನುವುದು ಅವರ ಆಶಯ.ಅವರ ಪುತ್ರನನ್ನು ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ,ಇವತ್ತು ಚಿಂಚನಸೂರು ಸೋಲಿಗೆ ಕಾಂಗ್ರೆಸ್ ಕಾರಣ, ಎಲ್ಲರೂ ನಮ್ಮ‌ಮನೆ ಮುಂದೆ ಬಂದು ನಿಲ್ಲಬೇಕು ಎನ್ನುವುದೇ ಅವರ ಅಪೇಕ್ಷೆ,ಅದಕ್ಕೆ‌ನಾವು ಪಕ್ಷ ತೊರೆದು ಬಿಜೆಪಿ ಸೇರಿದ್ದೇವೆ, ಮುಂದಿನ ಲೋಕಸಭಾ ಚುನಟವಣೆಯಲ್ಲಿ
ಗುಲಬರ್ಗದಲ್ಲಿ ಬಿಜೆಪಿ‌ ವಿಜಯದ ಪತಾಕೆ ಹಾರಿಸಲಿದೆ.ನಾವಿಬ್ಬರ ಬಂದ ಮೇಲ ಅವರು ನಿಲ್ತಾರೋ ಇಲ್ಲೋ ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಗೆ ಪರೋಕ್ಷ ಟಾಂಗ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ