ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ತೆರಳಲಿರುವ ಗೋವಾ ಸಿಎಂ

ಪಣಜಿ: ಅನಾರೋಗ್ಯ ಹಿನ್ನಲೆಯಲ್ಲಿ ಗೋವಾ ಮುಖ್ಯಮಂತ್ರಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಮ್ಮೆ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಪ್ಯಾಂಕ್ರಿಯಾಟಿಕ್​ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಪರಿಕ್ಕರ್​ ಅವರು ಅಮೆರಿಕದಲ್ಲಿ ಮೂರು ತಿಂಗಳ ಚಿಕಿತ್ಸೆ ಪಡೆದು ಜೂನ್​ನಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದರು. ಆ ನಂತರ ಇತ್ತೀಚೆಗೆ ಮತ್ತೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದರು. ಅವರು ಅಮೆರಿಕದಿಂದ ವಾಪಸ್ಸಾದ ಮಾರನೆಯ ದಿನ ಆಗಸ್ಟ್​ 23 ರಂದು ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

ಪರಿಕ್ಕರ್​ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡು ಬಂದಿದೆ. ಹೀಗಾಗಿ ಅವರು ಇಂದು ಸಂಜೆ 5 ಗಂಟೆಗೆ ಮತ್ತೊಮ್ಮೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ, ಗಾಬರಿ ಪಡುವ ಅಗತ್ಯವಿಲ್ಲ ಎಂದು ಗೋವಾ ವಿಧಾನಸಭೆ ಸ್ಪೀಕರ್​ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.

ಪರಿಕ್ಕರ್​ ಅವರ ಅನುಪಸ್ಥಿತಿಯಲ್ಲಿ ಆಡಳಿತವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದರ ಕುರಿತು ಮಾಹಿತಿ ಇಲ್ಲ. ಗೋವಾ ಬಿಜೆಪಿ ಅಧ್ಯಕ್ಷ ವಿನಯ್​ ತೆಂಡುಲ್ಕರ್​ ಅವರು ಇಂದು ಪರಿಕ್ಕರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಆ ನಂತರ ಈ ಸಂಬಂಧ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಕೇಂದ್ರ ಆಯುಷ್​ ಮಂತ್ರಿ ಶ್ರೀಪಾದ್​ ನಾಯಕ್​ ತಿಳಿಸಿದ್ದಾರೆ.

Manohar Parrikar,Fly To US Again, After Health Complications

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ