ಕೇರಳ ಜಲಪ್ರಳಯ: ನಾಸಾ ಬಿಡುಗಡೆ ಮಾಡಿದೆ ಪ್ರವಾಹಕ್ಕೂ ಮೊದಲಿನ ಹಾಗೂ ನಂತರದ ಚಿತ್ರ

ನವದೆಹಲಿ: ಕೇರಳ ಜಲಪ್ರಳಯದ ಭೀಕರತೆಯನ್ನು ಉಪಗ್ರಹಗಳ ಸಹಾಯದಿಂದ ಫೆಬ್ರುವರಿ 6 ಮತ್ತು ಆಗಸ್ಟ್‌ 22ರಂದು ತೆಗೆದಿರುವ ಕೇರಳದ ಚಿತ್ರಗಳು ಮತ್ತು ವಿಶ್ಲೇಷಣೆ-‘ಬಿಫೋರ್ ಅಂಡ್ ಆಫ್ಟರ್ ಕೇರಳ ಫ್ಲಡ್ಸ್’ ವರದಿಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಬಿಡುಗಡೆ ಮಾಡಿದೆ.

ಪ್ರವಾಹಕ್ಕೂ ಮೊದಲಿನ ಚಿತ್ರಗಳನ್ನು ಲ್ಯಾಂಡ್‌ಸೆಟ್ 8 ಉಪಗ್ರಹದ ಮಲ್ಟಿಸ್ಪೆಕ್ಟ್ರಲ್ ಉಪಕರಣದಿಂದ ಹಾಗೂ ಪ್ರವಾಹದ ನಂತರದ ಚಿತ್ರಗಳನ್ನು ಯೂರೋಪ್ ಬಾಹ್ಯಾಕಾಶ ಸಂಸ್ಥೆಯ ಸೆಂಟಿನೆಲ್–2 ಉಪಗ್ರಹಗಳ ಮೂಲಕ ತೆಗೆಯಲಾಗಿದೆ.

ಎರಡನೇ ಚಿತ್ರದಲ್ಲಿ ಕೇರಳದ ಅನೇಕ ನದಿಗಳು ಉಕ್ಕಿಹರಿಯುತ್ತಿರುವುದನ್ನು ಗಮನಿಸಬಹುದು. ಕರುವನ್ನೂರ್ ನದಿಯು 40 ಹಳ್ಳಿಗಳನ್ನು ಮುಳುಗಿಸಿ, ಎರಡು ರಾಷ್ಟ್ರೀಯ ಹೆದ್ದಾರಿಗಳ ನಡುವಣ 2.2 ಕಿ.ಮೀ. ವಿಸ್ತೀರ್ಣದ ಭೂಮಿಯನ್ನು ಕೊಚ್ಚಿ ಹಾಕಿರುವುದು ಚಿತ್ರದಲ್ಲಿ ದಾಖಲಾಗಿದೆ. ತನ್ನ ಎರಡೂ ದಂಡೆಗಳನ್ನು ಕೊಚ್ಚಿಹಾಕಿದ ಪರಿಯಾರ್ ನದಿಯ ನೋಟವೂ ಇದರಲ್ಲಿ ಇದೆ. ಚಿತ್ರಗಳನ್ನು ಫಾಲ್ಸ್‌ಕಲರ್ ತಂತ್ರಕ್ಕೆ ಅನುಗುಣವಾಗಿ ಎಡಿಟ್ ಮಾಡಲಾಗಿದೆ. ಪ್ರವಾಹದ ನೀರು ಗಾಢ ನೀಲಿ ಬಣ್ಣದಲ್ಲಿ ಕಾಣಿಸಿದರೆ, ಗಿಡಮರಗಳು ಗಾಢ ಹಸಿರಿನಲ್ಲಿ ಕಾಣಿಸುತ್ತದೆ.

ದಕ್ಷಿಣ ಕರ್ನಾಟಕ ಮತ್ತು ಕೇರಳದ ವಾತಾವರಣದ ಮೇಲೆ ಪಶ್ಚಿಮಘಟ್ಟಗಳ ಪ್ರಾಮುಖ್ಯತೆ ಸಾರಿಹೇಳಲು ನಾಸಾ ಕೆಲ ದಿನಗಳ ಹಿಂದೆಯಷ್ಟೇ ಉಪಗ್ರಹದ ಲೆಕ್ಕಾಚಾರ ಆಧರಿಸಿ ಸಿದ್ಧಪಡಿಸಿದ ಮಳೆ ವಿಶ್ಲೇಷಣೆ ಬಿಡುಗಡೆ ಮಾಡಿತ್ತು. ಭಾರತದ ಮತ್ತು ಆಗ್ನೇಯ ಏಷ್ಯಾದ ಒಟ್ಟು ಮಳೆ ಪ್ರಮಾಣವನ್ನು ಬಿಡುಗಡೆ ಮಾಡುವ ಮೂಲಕ ವಿಶ್ವಕ್ಕೆ ಪಶ್ಚಿಮಘಟ್ಟಗಳ ಪ್ರಾಮುಖ್ಯತೆ ಮನಗಾಣಿಸುವ ಪ್ರಯತ್ನವನ್ನೂ ನಾಸಾ ಮಾಡಿದೆ.

ಪ್ರವಾಹಕ್ಕೆ ಜಲಾಶಯಗಳ ಅವೈಜ್ಞಾನಿಕ ನಿರ್ವಹಣೆ ಕಾರಣ:
ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಲು ಪ್ರಕೃತಿ ವಿಕೋಪದ ಜೊತೆಗೆ ಜಲಾಶಯಗಳ ಅವೈಜ್ಞಾನಿಕ ನಿರ್ವಹಣೆಯೂ ಕಾರಣ ಎಂದು ನಾಸಾದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಳೆ ಜೋರಾಗುವ ಮೊದಲೇ ಜಲಾಶಯಗಳಿಂದ ನೀರನ್ನು ಹಂತಹಂತವಾಗಿ ಬಿಡಬೇಕಿತ್ತು. ಆದರೆ ಅಧಿಕಾರಿಗಳು ಜಲಾಶಯಗಳು ಭರ್ತಿಯಾಗುವವರೆಗೂ ಕಾದುನೋಡುವ ತಂತ್ರ ಅನುಸರಿಸಿದರು. ಇಡುಕ್ಕಿ ಸೇರಿದಂತೆ ಒಟ್ಟು 80 ಜಲಾಶಯಗಳಿಂದ ಒಮ್ಮೆಲೆ ನೀರನ್ನು ಹೊರಬಿಟ್ಟರು. ಈ ಪೈಕಿ 35 ಜಲಾಶಯಗಳಿಂದ ನೀರನ್ನು ಇದೇ ಮೊದಲ ಬಾರಿಗೆ ಹೊರಬಿಡಲಾಯಿತು. ಜಲಾಶಯಗಳಿಂದ ನೀರು ಬಿಡುವ ನಿರ್ಧಾರವನ್ನು ತಡವಾಗಿ ತೆಗೆದುಕೊಳ್ಳಲಾಯಿತು. ಭಾರಿ ಮಳೆಯೊಂದಿಗೆ ಇದು ಬೆಸೆದುಕೊಂಡಿದ್ದು ಪರಿಸ್ಥಿತಿ ವಿಷಮಿಸಲು ಕಾರಣವಾಯಿತು’ ಎಂದು ನಾಸಾದ ವಿಜ್ಞಾನಿ ಸುಜಯ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ’

ಆಗಸ್ಟ್ 8ರಿಂದ ಈವರೆಗೆ ಕೇರಳದಲ್ಲಿ ಪ್ರವಾಹಕ್ಕೆ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 4.62 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. 1,435 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದಿಂದಾಗಿ ಕೇರಳದಲ್ಲಿ ಒಟ್ಟು 20 ಸಾವಿರ ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Kerala floods, NASA releases, before and after images

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ