ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಆದರೆ ನಾವು ಕಳೆದುಕೊಂಡಿರಲಿಲ್ಲ ಎಂದ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಭಾರತೀಯರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಆದರೆ ನಮ್ಮ ಸಾಮರ್ಥ್ಯದ ಬಗ್ಗೆ ನಾವು ನಂಬಿಕೆ ಕಳೆದುಕೊಂಡಿರಲಿಲ್ಲ. ಹೀಗಾಗಿಯೇ ನಾವು ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಮೊದಲೆರಡು ಟೆಸ್ಟ್ ಪಂದ್ಯಗಳ ಸೋಲಿನ ಬಳಿಕ ತಂಡದ ಹಲವು ಆಟಗಾರರು ಕುಗ್ಗಿಹೋಗಿದ್ದರು. ಆದರೆ ಡ್ರೆಸ್ಸಿಂಗ್ ರೂಂನಲ್ಲಿ ಮುಂದಿನ ಪಂದ್ಯ ಹೇಗೆ ಗೆಲ್ಲಬೇಕು ಎಂಬುದನ್ನು ಹೆಚ್ಚು ಚರ್ಚಿಸಿದ್ದೇವು. ಜೊತೆಗೆ ನಮ್ಮ ಸಾಮರ್ಥ್ಯವನ್ನು ನಾವು ಚಿಕ್ಕದಾಗಿ ಕಾಣಬಾರದು ಎಂದುಕೊಂಡು ಆಡಿದೆವು ಅದರ ಪ್ರತಿಫಲ ಹೀಗ ಸಿಕ್ಕಿದೆ ಎಂದರು.
ಈ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಗೆಲುವು ನಮಗೆ ಅಗತ್ಯವಾಗಿತ್ತು. ಎಲ್ಲಾ ವಿಭಾಗದಲ್ಲೂ ನಾವು ಉತ್ತಮ ಪ್ರದರ್ಶನವನ್ನು ನೀಡಿದ್ದರ ಫಲ. ಇದು ನಮ್ಮ ಸಂಪೂರ್ಣ ಟೆಸ್ಟ್ ಗೆಲುವು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 1 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಗೆಲುವಿನ ಆಸೆಯನ್ನು ಉಳಿಸಿಕೊಂಡಿದೆ.