300ಕ್ಕೂ ಅಧಿಕ ಎಫ್‌ಡಿಸಿ ಔಷಧಗಳ ನಿಷೇಧ ಸಂಭವ

ಹೊಸದಿಲ್ಲಿ : ಕಾಫ್‌ ಸಿರಫ್‌, ಪೇನ್‌ ಕಿಲ್ಲರ್ಸ್‌, ಜ್ವರ ಮತ್ತಿತರ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಜನಪ್ರಿಯ ಸಾರಿಡಾನ್‌, ಡಿ ಕೋಲ್ಡ್‌ ಟೋಟಲ್‌, ಫಿನ್ಸಿಡಲ್‌ ಸೇರಿದಂತೆ ಸುಮಾರು 300ಕ್ಕೂ ಅಧಿಕ ಎಫ್‌ಡಿಸಿ ಔಷಧಗಳನ್ನು ಸರಕಾರವು ಸದ್ಯದಲ್ಲಿಯೇ ನಿಷೇಧಿಸಲಿದೆ.

ಎಫ್‌ಡಿಸಿ ಔಷಧಗಳ ನಿಷೇಧಕ್ಕೆ ಭಾರತದ ಔಷಧಗಳ ತಾಂತ್ರಿಕ ಸಲಹಾ ಸಮಿತಿಯ(ಡಿಟಿಎಬಿ) ಉಪ ಸಮಿತಿಯ ಶಿಫಾರಸು ಮಾಡಿತ್ತು. ಅದನ್ನು ಆರೋಗಗ್ಯ ಸಚಿವಾಲಯ ಅಂಗೀಕರಿಸಿದ್ದು 343 ಔಷಧಗಳನ್ನು ಸದ್ಯದಲ್ಲಿಯೇ ನಿಷೇಧ ಮಾಡಲಿದೆ.

ನಿಷೇಧದ ಕ್ರಮದಿಂದ ಅಬಾಟ್‌ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಪಿರಮಲ್‌, ಸಿಪ್ಲಾ ಮತ್ತು ಲುಪಿನ್‌ನಂಥ ದೇಶೀಯ ಕಂಪನಿಗಳ ಮೇಲೂ ಪರಿಣಾಮ ಉಂಟಾಗಲಿದೆ. ಎಫ್‌ಡಿಸಿ ಔಷಧಗಳ ನಿಷೇಧವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಕಂಪನಿಗಳು ಹೋರಾಟ ನಡೆಸಿದ್ದವು.

ಇಂಥ ಔಷಧಗಳ ಉತ್ಪಾದನೆ, ಮಾರಾಟ, ವಿತರಣೆಗೆ ತಡೆ ಬೀಳಲಿದೆ. ನಿಷೇಧದ ಕ್ರಮ ಜಾರಿಗೊಳಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಡಿಟಿಎಬಿಗೆ ಸೂಚಿಸಿತ್ತು.

ನಿಷೇಧಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆಯು ಈ ವಾರ ಹೊರಬೀಳುವ ಸಾಧ್ಯತೆ ಇದೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇನ್ನೊಬ್ಬ ಅಧಿಕಾರಿಯ ಪ್ರಕಾರ, ಈ ವಿಷಯವು ಇನ್ನೂ ಪರಿಶೀಲನೆಯ ಹಂತದಲ್ಲಿದೆ.

ಅಲ್ಪ ಪರಿಣಾಮ 

ಮಾರುಕಟ್ಟೆಯ ಪ್ರಮುಖ ಕಂಪನಿಗಳು ಈಗಾಗಲೇ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ. ಇತರೆ ಔಷಧಗಳ ಉತ್ಪಾದನೆಗೆ ಈಗಾಗಲೇ ತೊಡಗಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

2,183 ಕೋಟಿ ರೂ. 

ನಿಷೇಧವಾಗಲಿರುವ ಎಫ್‌ಡಿಸಿ ಮಾರುಕಟ್ಟೆಯ ಗಾತ್ರ. ವರ್ಷದಿಂದ ವರ್ಷಕ್ಕೆ ಈ ಔಷಧಗಳ ಮಾರಾಟ ಕಡಿಮೆಯಾಗುತ್ತಿದೆ. 2016ರಲ್ಲಿ ಇದು 3,000 ಕೋಟಿ ರೂ. ಮಾರುಕಟ್ಟೆಯ ಗಾತ್ರ ಹೊಂದಿತ್ತು.

343 

ಎಫ್‌ಡಿಸಿ ಔಷಧಗಳು ಸದ್ಯದಲ್ಲೇ ನಿಷೇಧ

ಏನಿದು ಎಫ್‌ಡಿಸಿ?

ಎರಡು ಅಥವಾ ಎರಡಕ್ಕಿಂತ ಹೆಚ್ಚು ಔಷಧ ವಸ್ತುಗಳನ್ನು ನಿಗದಿತ ಪ್ರಮಾಣದಲ್ಲಿ ಸಂಯೋಜಿಸಿ ಸಿದ್ಧಪಡಿಸುವ ಔಷಧವನ್ನು ನಿಗದಿತ ಪ್ರಮಾಣ ಸಂಯೋಜನೆಯ(ಫಿಕ್ಸೆಡ್‌ ಡೋಸ್‌ ಕಾಂಬಿನೇಶನ್‌-ಎಫ್‌ಡಿಸಿ) ಔಷಧಗಳೆಂದು ಕರೆಯಲಾಗುತ್ತದೆ. ಹಲವಾರು ಎಫ್‌ಡಿಸಿಗಳು ಎಂಟು ಅಥವಾ ಒಂಬತ್ತು ಔಷಧಿಗಳ ಸಂಯೋಜನೆಗಳನ್ನು ಹೊಂದಿವೆ.

ವಿರೋಧ ಏಕೆ?

ಎಫ್‌ಡಿಸಿ ಔಷಧಗಳಲ್ಲಿ ಮೂಲಪದಾರ್ಥಗಳು ಇವೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಿಲ್ಲ. ಅವುಗಳ ಚಿಕಿತ್ಸಕ ಗುಣದ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ತಜ್ಞರ ಸಮಿತಿ ಸಲಹೆಯನ್ವಯ ಕೇಂದ್ರವು ಎಫ್‌ಡಿಸಿ ಔಷಧಗಳನ್ನು 2016ರಲ್ಲಿ ನಿಷೇಧಿಸಿತ್ತು. ನಂತರ ನ್ಯಾಯಾಂಗ ಹೋರಾಟಗಳೂ ನಡೆದಿದ್ದವು. ಈಗ ನಿಷೇಧದ ಕ್ರಮ ಜಾರಿಗೊಳಿಸಲು ಆರೋಗ್ಯ ಸಚಿವಾಲಯ ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ