ರಿಶಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್?

ಕನ್ನಡದಿಂದ ಬಾಲಿವುಡ್ ಗೆ ಹೋಗಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ ನಟ-ನಟಿಯರಿದ್ದಾರೆ. ಇದೀಗ ನಿರ್ದೇಶಕರ ಸರದಿ. ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ನಿರ್ದೇಶಕ ರಿಶಬ್ ಶೆಟ್ಟಿ ಬಿಗ್ ಬಿ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೌದು ಈ ಸುದ್ದಿ ಈಗ ಸ್ಯಾಂಡಲ್ ವುಡ್ ನಲ್ಲಿ ದಟ್ಟವಾಗಿದೆ.ಅಮಿತಾಬ್ ಬಚ್ಚನ್ ಅವರಿಗೆ ಹೊಂದಿಕೆಯಾಗುವ ಕಥೆಯೊಂದು ರಿಶಬ್ ಶೆಟ್ಟಿ ಅವರ ಬಳಿಯಿದ್ದು ಅದನ್ನು ಹಿಡಿದುಕೊಂಡು ಮುಂಬೈಗೆ ಹೋಗಿ ಇತ್ತೀಚೆಗೆ ಬಿಗ್ ಬಿಯನ್ನು ಭೇಟಿಯಾದರಂತೆ. ಈ ಬಗ್ಗೆ ರಿಶಬ್ ಶೆಟ್ಟಿ ಹೀಗೆ ಹೇಳುತ್ತಾರೆ, ”ಹೌದು ನಾನು ಮುಂಬೈಗೆ ಹೋಗಿ ಅಮಿತಾಬ್ ಬಚ್ಚನ್ ಅವರೊಂದಿಗೆ ಮಾತನಾಡಿರುವುದು ನಿಜ. ಅವರು ಕಥೆಯ ಆರಂಭ ಭಾಗವನ್ನು ಕೇಳಿ ಖುಷಿಪಟ್ಟಿದ್ದಾರೆ. ಮಾತುಕತೆ ಆರಂಭದ ಹಂತದಲ್ಲಿದೆ, ಕಥೆಯನ್ನು ಇನ್ನೂ ವಿಸ್ತರಿಸಬೇಕಿದೆ” ಎಂದರು.ಚಿತ್ರಕ್ಕೆ ಸುದೀಪ್ ಅವರನ್ನು ಕೂಡ ಕರೆತರಲು ರಿಶಬ್ ಶೆಟ್ಟಿ ಉತ್ಸುಕರಾಗಿದ್ದಾರೆ. ನನ್ನ ಯೋಜನೆಯನ್ನು ಸುದೀಪ್ ಅವರಿಗೆ ಹೇಳಿದ್ದೇನೆ, ಈ ಬಗ್ಗೆ ಅವರ ಜೊತೆ ವಿವರವಾಗಿ ಮಾತುಕತೆಯಾಗಬೇಕಿದೆ ಎನ್ನುತ್ತಾರೆ. ಮುಂದಿನ ವರ್ಷ ಈ ಪ್ರಾಜೆಕ್ಟ್ ಮೇಲೆ ಗಮನಹರಿಸುವುದಾಗಿ ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೃತಧಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ