ನವದೆಹಲಿ:ಆ-3: ರಾಷ್ಟ್ರೀಯ ನಾಗರಿಕತ್ವ ನೋಂದಣಿ(ಎನ್ ಆರ್ ಸಿ) ಪಟ್ಟಿಯಿಂದ ಯಾವೊಬ್ಬ ಭಾರತೀಯರ ಹೆಸರೂ ಹೊರಗುಳಿಯಲು ಸಾಧ್ಯವಿಲ್ಲ. ಪಟ್ಟಿಯಲ್ಲಿ ಹೆಸರಿಲ್ಲದವರು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಂಸತ್ ಕಲಾಪದಲ್ಲಿ ಇಂದೂ ಕೂಡ ಅಸ್ಸಾಂ ರಾಷ್ಟ್ರೀಯ ನಾಗರಿಕತ್ವ ನೋಂದಣಿ ವಿಚಾರ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ಟಿಎಂಸಿ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಗೃಹ ಸಚಿವರು, ಯಾವುದೇ ‘ಭಾರತೀಯ ನಾಗರಿಕನ’ ಹೆಸರು ಎನ್ಆರ್ ಸಿ ಪಟ್ಟಿಯಿಂದ ಕೈ ಬಿಡುವುದಿಲ್ಲ. ಅಂತೆಯೇ ಎನ್ಆರ್ ಸಿ ವಿಚಾರವನ್ನು ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ನಾನು ಮತ್ತೆ ಹೇಳುತ್ತಿದ್ದೇನೆ. ಎನ್ಆರ್ ಸಿ ಪಟ್ಟಿಯಲ್ಲಿ ಹೆಸರಿಲ್ಲದವರ ವಿರುದ್ಧ ಯಾವುದೇ ರೀತಿಯ ದಬ್ಬಾಳಿಕೆಯ ಕ್ರಮ ಅನುಸರಿಸುವುದಿಲ್ಲ. ಆದರೆ ಈ ಬಗ್ಗೆ ಅನಗತ್ಯವಾಗಿ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇದು ಖಂಡನೀಯ ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. 1985ರಿಂದಲೇ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದನ್ನು 2005ರಲ್ಲಿ ಅಪ್ ಡೇಟ್ ಮಾಡಿದ್ದರು. ಬಳಿಕ ಇದೀಗ ನಾವು ಮತ್ತೆ ಪರಿಷ್ಕರಣೆ ಮಾಡುತ್ತಿದ್ದೇವೆ. ಸ್ವತಃ ಸುಪ್ರೀಂಕೋರ್ಟ್ ಇದರ ಮೇಲ್ವಿಚಾರಣೆ ನಡೆಸುತ್ತಿದ್ದು, ಇದರ ವಿರುದ್ಧ ಹೇಳಿಕೆ ನೀಡುವುದು ನ್ಯಾಯಾಲಯಕ್ಕೆ ಮಾಡುವ ಅಪಮಾನ. ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಇದು ಕರಡು ಮಾತ್ರ. ಅಂತಿಮ ಪಟ್ಟಿಯಲ್ಲ. ಪಟ್ಟಿಯಲ್ಲಿ ಹೆಸರಿಲ್ಲದವರು ಮತ್ತೆ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬರಿಗೂ ಈ ಅವಕಾಶ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.
National Registry of Citizens (NRC),Rajnath Singh,process fair and transparent