ಪ್ರಧಾನಿ ಮೋದಿ ರೈತ ಸಮಾವೇಶ ರದ್ದು

ಬೆಂಗಳೂರು,ಜು.25-ರಾಜ್ಯದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇದೇ 29ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೈತ ಸಮಾವೇಶವನ್ನು ಬಿಜೆಪಿ ರದ್ದುಪಡಿಸಿದೆ.

ಅಲ್ಲದೆ ಲೋಕಸಭೆ ಚುನಾವಣೆ ಕುರಿತಂತೆ ಪಕ್ಷದ ಸಂಘಟನೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚಿಸಲು 28ರಂದು ಆಗಮಿಸಬೇಕಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಬೆಂಗಳೂರು ಕಾರ್ಯಕ್ರಮವನ್ನೂ ಕೂಡ ಮುಂದೂಡಲಾಗಿದೆ.
ನಿಗದಿಯಂತೆ 29ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸಲು ಬಿಜೆಪಿ ಉದ್ದೇಶಿಸಿತ್ತು. ದಕ್ಷಿಣ ಭಾರತದಲ್ಲಿ ಚಿಕ್ಕೋಡಿ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಲಿದ್ದರು.

ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ಮುಂಬೈ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಬಿಜೆಪಿ ನಡೆಸಲು ಉದ್ದೇಶಿಸಿದ್ದ ರೈತ ಸಮಾವೇಶವನ್ನು ರದ್ದುಪಡಿಸಲಾಗಿದೆ.

ದೇಶಾದ್ಯಂತ ಒಟ್ಟು 200 ರೈತ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿತ್ತು. ಇದರಲ್ಲಿ ದಕ್ಷಿಣ ಭಾರತದಲ್ಲಿ ಪ್ರಧಾನಿಯವರು ಆಯ್ಕೆ ಮಾಡಿಕೊಂಡಿದ್ದು ಚಿಕ್ಕೋಡಿ ಮಾತ್ರ.  ಆದರೆ ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದು ಹಾಗೂ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಕಾರಣ ಇಂಥ ಸಮಯದಲ್ಲಿ ಸಮಾವೇಶ ನಡೆಸುವುದು ಸೂಕ್ತವಲ್ಲ ಎಂಬುದು ಬಿಜೆಪಿ ನಾಯಕರ ತಿರ್ಮಾನ.

ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಾರದಿದ್ದರೆ ಮುಜುಗರಕ್ಕೆ ಸಿಲುಕಬಹುದೆಂಬುದು ಒಂದು ಕಾರಣವಾದರೆ ಪ್ರಧಾನಿಯವರ ಕಾರ್ಯಕ್ರಮ ದಿನದಂದು ಮಳೆ ಬಂದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ ಎಂಬ ಭೀತಿಯೂ ಎದುರಾಗಿದೆ.

ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರೈತರಿಗಾಗಿ ಮಾಡಿರುವ ಹೊಸ ಯೋಜನೆಗಳನ್ನು ಮನವರಿಕೆ ಮಾಡಿಕೊಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈಗಾಗಲೇ ಪ್ರಧಾನಿಯವರು ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಸೇರಿದಂತೆ ನಾನಾ ಕಡೆ ಬೃಹತ್ ಸಮಾವೇಶ ನಡೆಸುವ ಮೂಲಕ ಲೋಕಸಭೆ ಚುನಾವಣೆಗೆ ಚಾಲನೆ ನೀಡಿದ್ದರು.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಾರದಿದ್ದರೂ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪ್ರಧಾನಿಯವರು ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಂಭವವಿತ್ತು. ಮಳೆ ಬರುತ್ತಿರುವ ಕಾರಣ ಕಾರ್ಯಕ್ರಮವನ್ನು ಬಿಜೆಪಿ ಮುಂದೂಡಿದೆ.

ಅಮಿತ್ ಷಾ ಕಾರ್ಯಕ್ರಮವೂ ಮುಂದೂಡಿಕೆ:
ಇನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾರ್ಯಕ್ರಮವು ಮುಂದೂಡಿಕೆಯಾಗಿದೆ. ಈ ಹಿಂದೆ ನಿಗದಿಯಾದಂತೆ ಅಮಿತ್ ಷಾ ಇದೇ 28ರಂದು ಬೆಂಗಳೂರಿಗೆ ಆಗಮಿಸಬೇಕಿತ್ತು.

2019ರ ಲೋಕಸಭೆ ಚುನಾವಣೆಗೆ ರಾಜ್ಯದಿಂದ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯಿಟ್ಟುಕೊಂಡಿರುವ ಬಿಜೆಪಿಯ ಚುನಾವಣಾ ಚಾಣಾಕ್ಷ ಅಮಿತ್ ಷಾ, ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ, ಬೂತ್ ಮಟ್ಟವನ್ನು ಇನ್ನಷ್ಟು ಬಲಪಡಿಸುವುದು, ಕಾಂಗ್ರೆಸ್-ಜೆಡಿಎಸ್ ದೋಸ್ತಿಯನ್ನು ಮೆಟ್ಟಿ ಹೆಚ್ಚಿನ ಸ್ಥಾನ ಗಳಿಸಲು ತಮ್ಮದೇ ಆದ ರಣತಂತ್ರ ರೂಪಿಸಲು ಆಗಮಿಸುತ್ತಿದ್ದರು.

ಷಾ ಅವರ ಆಗಮನಕ್ಕಾಗಿ ಬಿಜೆಪಿಯ ಸ್ಥಳೀಯ ನಾಯಕರು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಬೆಂಗಳೂರಿನಲ್ಲೂ ಮಳೆಯಾಗುತ್ತಿರುವ ಕಾರಣ ಇಂಥ ಸಮಯದಲ್ಲಿ ಪಕ್ಷದ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಅವರ ಕಾರ್ಯಕ್ರಮವೂ ಮುಂದೂಡಿಕೆಯಾಗಿದೆ.

Prime Minister Narendra Modi, farmer, convention, BJP,Canceled

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ