ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಾಳೆಯ ಮಂಡಿಸಿದ್ದ ಅವಿಶ್ವಾಸ ನಿರ್ಣಯ 2019ರ ಲೋಕಸಭಾ ಚುನಾವಣೆಯ ಬಲ ಪ್ರದರ್ಶನಕ್ಕೆ ವೇದಿಕೆ ಎಂಬಂತೆ ಕಂಡು ಬಂದಿತ್ತು.
ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ನಿರೀಕ್ಷೆಯಂತೆಯೇ ಸೋಲಾಗಿದ್ದು, ಈ ಮೂಲಕ 2019ನೇ ಲೋಕಸಭಾ ಚುನಾವಣೆಯಲ್ಲಿ ತನ್ನ ಬಲ ಏನೆಂಬುದನ್ನು ಎನ್’ಡಿಎ ಸಾಬೀತುಪಡಿಸಿದೆ.
ಸಂಖ್ಯಾಬಲದ ಕೊರತೆ ಇದ್ದರೂ ತೆಲುಗು ದೇಶಂ ಹಾಗೂ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಸರ್ಕಾರವನ್ನು ಬೀಳುವುದಕ್ಕಿಂತಲೂ ಮುಖ್ಯವಾಗಿ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದೇ ಕೈಕೊಟ್ಟ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ತೆಲುಗುದೇಶಂ ಪಕ್ಷದ ಉದ್ದೇಶವಾಗಿತ್ತು.
ಇನ್ನು ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಕಾಲ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಕೆಲ ಪಕ್ಷಗಳು ಈ ನಿರ್ಣಯವನ್ನು ಬೆಂಬಲಿಸಿದ್ದವು.
ಶುಕ್ರವಾರ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವೆ ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ಭಾರೀ ಚರ್ಚೆಗಳು ನಡೆದಿತ್ತು. ಬೆಳಿಗ್ಗೆ 11ರಿಂದಲೇ ಆರಂಭವಾದ ಅವಿಶ್ವಾಸ ಕಲಾಪ, ಲೋಕಸಭೆ ಈ ವರೆಗೂ ಕಂಡು ಕೇಳರಿಯದ ವಿಚಿತ್ರ ನಡವಳಿಕೆಗಳಿಗೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರು ರಾಜಕೀಯ ಎದುರಾಳಿ ಮೋದಿಯವರ ಕುರ್ಚಿ ಬಳಿಯೇ ತೆರಳಿ ಅಪ್ಪಿಕೊಂಡು ಆತ್ಮೀಯತೆ ತೋರಿದರು. ಮತ್ತೊಂದೆಡೆ ಸದನದಲ್ಲಿ ಕಣ್ಣು ಹೊಡೆಯುವ ಮೂಲಕ ಗಮನ ಸೆಳೆದರು. ಘಟಾನುಘಟಿ ನಾಯಕರ ಭಾಷಣದ ಬಳಿಕ ರಾತ್ರಿ ಪ್ರಧಾನಿ ಮೋದಿ ಮಾತನಾಡಿ, ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದರು.
ಚರ್ಚೆ ಬಳಿಕ ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, ಅದು ಬಿದ್ದು ಹೋಯಿತು ಎಂದು ಸ್ಪೀಕರ್ ಘೋಷಣೆ ಮಾಡಿದರು. ಆದರೆ, ನಂತರ ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಗಿದೆ ಇನ್ನು ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದೆ. ಈ ಮೂಲಕ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಇನ್ನು ಬೆಂಬಲಿಸಿದ್ದ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿಯ ಕಟುಟೀಕಾಕಾರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಶಿವಸೇನೆ, ಟಿಆರ್’ಎಸ್, ಒಡಿಶಾದ ಬಿಜೆಡಿ ಸದಸ್ಯರು ನಿರೀಕ್ಷೆಯಂತೆಯೇ ಗೈರು ಹಾಜರಾಗಿದ್ದರು. ಎಐಡಿಎಂಕೆ ಸದಸ್ಯರು ಸರ್ಕಾರದ ಪರವಾಗಿ ಮತ ಹಾಕಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಎನ್’ಡಿಎ ಸರ್ಕಾರಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳು ಬಿದ್ದಿದೆ. ಹಾಲಿ ಸದನದಲ್ಲಿ ಎನ್’ಡಿಎ ಬಲ 315 ಇತ್ತು. ಆದರೆ, ಮತದಾನದ ವೇಳೆ ಎನ್’ಡಿಎಗೆ 325 ಮತ ಚಲಾವಣೆಯಾಗಿದೆ. ಇದು ವಾಗ್ದಾಳಿಯ ಮೂಲಕ ಸರ್ಕಾರವನ್ನು ಕಟ್ಟಿಹಾಕಲು ಯತ್ನಿಸಿದ್ದ ವಿರೋಧ ಪಕ್ಷಗಳಿಗೆ ಆದ ದೊಡ್ಡ ಸೋಲೆಂದೇ ಬಣ್ಣಿಸಲಾಗುತ್ತಿದೆ.