ನವದೆಹಲಿ:ಜು-೨೦: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಸಂಜೆ 6ಗಂಟೆಗೆ ಮತದಾನ ಪ್ರಕ್ರಿಯೆ ನಿಗಪಡಿಸಿರುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಚರ್ಚೆ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಸುಮಿತ್ರಾ ಮಹಾಜನ್ ಅವರು, ಗೊತ್ತುವಳಿ ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಸಂಜೆ 6 ಗಂಟೆಗೆ ನಿಗದಿಪಡಿಸಲಾಗಿದ್ದು, ಆಗತ್ಯಬಿದ್ದರೆ, ಊಟದ ಸಮಯವನ್ನು ಚರ್ಚೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಬಳಿಕ ವಿಶ್ವಾಸ ಮತಯಾಚನೆಗೆ ಕಡಿಮೆ ಸಮಯ ನೀಡುವುದಕ್ಕೆ ಸ್ಪೀಕರ್ ವಿರುದ್ಧ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಲು ಆರಂಭಿಸಿದರು. ಬಳಿಕ ಒಡಿಶಾದ ಬಿಜು ಜನತಾದಳ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು.
ಕಲಾಪ ಆರಂಭವಾಗುತ್ತಿದ್ದಂತೆಯೇ ತೆಲಗು ದೇಶಂ ಪಕ್ಷದ ಸಂಸದ ಜಯದೇವ್ ಗಲ್ಲಾ ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರು. ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಅವಿಶ್ವಾಸ ಗೊತ್ತುವಳಿ ಮೇಲೆ ಶುಕ್ರವಾರ ಒಟ್ಟು 7 ಗಂಟೆಗಳ ಕಾಲ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಸದಸ್ಯಬಲದ ಆಧಾರದಲ್ಲಿ ಬಿಜೆಪಿಗೆ 3 ಗಂಟೆ 33 ನಿಮಿಷ, ಕಾಂಗ್ರೆಸ್’ಗೆ 38 ನಿಮಿಷ, ಟಿಡಿಪಿಗೆ 11 ನಿಮಿಷ, ಎಐಎಡಿಎಂಕೆಗೆ 29 ನಿಮಿಷ, ಟಿಎಂಸಿಗೆ 27 ನಿಮಿಷ, ಬಿಜೆಪಡಿಗೆ 15 ನಿಮಿಷ, ಎನ್’ಸಿಪಿಗೆ 6 ನಿಮಿಷ, ಸಮಾಜವಾದಿ ಪಕ್ಷಕ್ಕೆ 6 ನಿಮಿಷ, ಎಲ್’ಜೆಎಸ್’ಪಿಗೆ 5 ನಿಮಿಷ, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳಿಗೆ ಒಟ್ಟಾರೆ 26 ನಿಮಿಷಗಳ ಕಾಲಾವಕಾಶ ನೀಡಲಾಗಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಕುರಿತು ಚರ್ಚೆ ನಡೆಯುತ್ತಿರುವುದು 15 ವರ್ಷಗಳಲ್ಲಿಯೇ ಇದೇ ಮೊದಲು. 2003ರಲ್ಲಿ ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಅವರು ವಾಜಪೇಯಿ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್’ಡಿಎ ಬಳಿ ಭರ್ಜರಿ ಬಹುಮತ ಇರುವ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸಕ್ಕೆ ಈ ಬಾರಿಯೂ ಹಿನ್ನಡೆಯಾಗುವುದು ಬಹುತೇಕ ಖಚಿತವೆಂದೇ ಹೇಳಲಾಗುತ್ತಿದೆ. ಕಳೆದ ಮಾರ್ಚ್ ವರೆಗೂ ಎನ್’ಡಿಎ ಕೂಟದಲ್ಲಿಯೇ ಇದ್ದ ತೆಲುಗು ದೇಶಂ ಪಕ್ಷ, ಆಂಧ್ರಪ್ರದೇಸಕ್ಕೆ ವಿಶೇಷ ಸ್ಥಾನಮಾನ ಕೊಡದ ಕಾರಣಕ್ಕೆ ಎನ್’ಡಿಎಯಿಂದ ನಿರ್ಗಮಿಸಿತ್ತು. ಬಜೆಟ್ ಅಧಿವೇಶನದಲ್ಲಿ ಟಿಡಿಪಿ, ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳು ನೀಡಿದ್ದ ಅವಿಶ್ವಾಸ ನೋಟಿಸ್’ನ್ನು ಗದ್ದಲದ ಹಿನ್ನಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತಿರಸ್ಕರಿಸಿದ್ದರು.
parliament session,No Confidence Motion,Voting,Sumitra Mahajan