ಮುಂಬೈ:ಜೂ-28: ಕಿಂಗ್ ಏರ್ ಸಿ90 (ವಿಟಿ-ಯುಪಿಝೆಡ್) ಚಾರ್ಟರ್ಡ್ ವಿಮಾನವೊಂದು ಮುಂಬೈ ಹೊರವಲಯದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂಬೈ ನಗರದ ಹೊರವಲಯದ ಘಾಟ್ಕೋಪರ್ನಲ್ಲಿ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ವಿಮಾನ ಅಪ್ಪಳಿಸಿದ ಸಂದರ್ಭ ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ಓರ್ವ ಪಾದಚಾರಿ ಕೂಡ ಸಾವನ್ನಪ್ಪಿದ್ದು, ವಿಮಾನ ದುರಂತಕ್ಕೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ನಿರ್ಮಾಣ ಹಂತದ ಕಟ್ಟಡ ಜಾಗೃತಿಯ ಮೇಲೆ 1.30ಕ್ಕೆ ವಿಮಾನ ಪತನಗೊಂಡಿದೆ. ಮುಂಬಯಿ ಏರ್ಪೋರ್ಟ್ನಿಂದ 3 ಕಿ.ಮೀ. ದೂರದಲ್ಲಿರುವಾಗಲೇ ವಿಮಾನ ಅವಘಡಕ್ಕೀಡಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಇಬ್ಬರು ನಿರ್ವಹಣಾ ಇಂಜಿನಿಯರ್ಗಳಿದ್ದರು. ಹಳೆಯ ಲಘು ವಿಮಾನ ಇದಾಗಿದ್ದು, ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಕಟ್ಟಡದ ಮೇಲೆ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ಪತನದದಿಂದಾಗಿ ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಅಗ್ನಿಶಾಮಕ ಪಡೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಮುಂಬೈ ಮೂಲದ ಯುವೈ ಏವಿಯೇಷನ್ ಪ್ರೈವೇಟ್ ಲಿ. ಸಂಸ್ಥೆಗೆ ಸೇರಿದ ವಿಮಾನವಾಗಿದ್ದು, ಗುಟ್ಕಾ ಉದ್ಯಮಿ ದೀಪಕ್ ಕೊಠಾರಿ ಅವರ ಒಡೆತನದಲ್ಲಿತ್ತು. ಅದಕ್ಕೂ ಮೊದಲು ಉತ್ತರ ಪ್ರದೇಶ ಸರಕಾರ ಆ ವಿಮಾನವನ್ನು ಬಳಸುತ್ತಿತ್ತು ಎಂದು ತಿಳಿದುಬಂದಿದೆ.
Mumbai,Ghatkopar,chartered Plane Crash, Four dead.