ಬೆಂಗಳೂರು: ಮಾಜಿ ಸಿಎಂ ಪ್ರಯೋಗಿಸಿದ ಅಸಮಾಧಾನದ ಕ್ಷಿಪಣಿಗೆ ಜೆಡಿಎಸ್ ತತ್ತರವಾಗಿದ್ದು, ಸಿದ್ದರಾಮಯ್ಯರ ಮೇಲೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆಂಡಮಂಡಲವಾಗಿದ್ದಾರಂತೆ.
ಜೆಡಿಎಸ್ ನಲ್ಲಿ ಸಚಿವರು, ಶಾಸಕರು ಬಾಯಿಯನ್ನೇ ಬಿಡುತ್ತಿಲ್ಲ. ಯಾರೊಬ್ಬರೂ ಸರ್ಕಾರದ ಪರ ವಹಿಸಿಕೊಂಡು ಮಾತೇ ಆಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದು ಟೀಂನಿಂದ ದಿನದಿಂದ ದಿನಕ್ಕೆ ಟಾಕ್ ಫೈಟ್ ನಡೆಯುತ್ತಿದೆ. ಆದರೆ ಜೆಡಿಎಸ್ ಶಾಸಕರು ಮಾತ್ರ ಎಲ್ಲದಕ್ಕೂ ಫುಲ್ ಸೈಲೆಂಟ್ ಆಗಿದ್ದಾರೆ. ಇದರಿಂದ ಮಾಜಿ ಪ್ರಧಾನಿ ದೇವೇಗೌಡ ಕೆಂಡಮಂಡಲವಾಗಿದ್ದಾರೆ ಎನ್ನಲಾಗಿದೆ
ಎಲ್ಲದಕ್ಕೂ ನಾವು ಅಪ್ಪ, ಮಕ್ಕಳೇ ಉತ್ತರ ಕೊಡಬೇಕಾ..? ಬಾಯಿಬಡ್ಕೋಬೇಕಾ..? ಪಕ್ಷದಲ್ಲಿ ಇರುವ ಹಿರಿಯರು, ಸಚಿವರು, ಶಾಸಕರು ಏನ್ ಮಾಡುತ್ತಿದ್ದಾರೆ..? ಯಾವುದೇ ವಿಚಾರಕ್ಕೂ ಒಬ್ಬರಿಂದಲೂ ಪಕ್ಷ ಸಮರ್ಥನೆಯ ಮಾತೇ ಇಲ್ಲ. ಮೌನವಾಗಿರೋದು ಸಾಕು, ಹಿಂಗೆ ಇದ್ದರೆ ಪಕ್ಷ ಉಳಿಯಲ್ಲ ಎಂದು ದೇವೇಗೌಡು ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದೇ ವಿಚಾರದಲ್ಲಿ ನಾಯಕರನ್ನ ಕ್ಲಾಸ್ ತೆಗೆದುಕೊಳ್ಳೋಕೆ ಮಾಜಿ ಪ್ರಧಾನಿ ಸಂಜೆ ಸಭೆ ಕರೆದಿದ್ದಾರೆ. ಜೆಪಿ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಪಿಜಿಆರ್ ಸಿಂಧ್ಯಾ, ಹೆಚ್. ವಿಶ್ವನಾಥ್, ಮಧು ಬಂಗಾರಪ್ಪ, ರಮೇಶ್ ಬಾಬು, ಜಫ್ರುಲ್ಲಾ ಖಾನ್, ಕುಪ್ಪೇಂದ್ರ ರೆಡ್ಡಿ, ಶರವಣ, ಫಾರೂಕ್, ವೈಎಸ್ ವಿ ದತ್ತಾ, ಕೋನರೆಡ್ಡಿ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.