ದೇವೇಗೌಡರ ಮನೆಗೆ ಸಿಎಂ ಪದೇ ಪದೇ ಹೋಗಬಾರದು: ಮಾಜಿ ಸಿಎಂ

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಷ್ಠ ಎಚ್ ಡಿ ದೇವೇಗೌಡ ಅವರ ಮನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪದೇ ಪದೇ ಹೋಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಮನ್ವಯ ಸಮಿತಿ ಸಭೆ ಬಳಿಕ ಹೈಕಮಾಂಡ್ ನಾಯಕರ ಬಳಿ ಈ ಕುರಿತು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಅಪ್ಪ ದೇವೇ ಗೌಡರ ಮನೆಗೆ ಸಿಎಂ ಆಗಾಗ ಬೇಟಿ ಕೊಟ್ಟರೆ ದೇವೇಗೌಡರು ಸೂಪರ್ ಸಿಎಂ ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಸರ್ಕಾರ ಪ್ರಮುಖ ನಿರ್ಧಾರಗಳು, ಕ್ಯಾಬಿನೆಟ್, ಅಧಿಕಾರಿಗಳ ಸಭೆ ಇದ್ದಾಗ ಹೋಗಲೇಬಾರದು ಎಂದು ಹೇಳಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೇ ಈ ರೀತಿ ಸಂದೇಶ ರವಾನೆಯಾದರೆ ದೋಸ್ತಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಸಿಎಂ ಕುಮಾರಸ್ವಾಮಿ ಅವರಿಗೆ ಸ್ವಲ್ಪ ಮನವರಿಕೆ ಮಾಡಿಕೊಡುವಂತೆ ಮಾಜಿ ಸಿಎಂ ಅವರು ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಮುಂದೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯನವರ ಈ ಪ್ರಸ್ತಾಪಕ್ಕೆ ಸಿಎಂ ಹೆಚ್‍ಡಿಕೆ ಒಪ್ಪುತ್ತಾರಾ? ಸಮ್ಮಿಶ್ರ ಸರ್ಕಾರದಲ್ಲಿ ತಂದೆಯ ಮನೆಗೆ ಮಗ ಹೋದರೆ ತಪ್ಪು ಸಂದೇಶ ಹೋಗುತ್ತಾ? ಎನ್ನುವ  ಪ್ರಶ್ನೆಗಳು ಎದ್ದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ