ಬೆಂಗಳೂರು:ಜೂ-23: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯಮಾಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಾಧಿಕಾರ ರಚನೆ ಮಾಡುವ ಕುರಿತು ಲೋಕಸಭೆಯಲ್ಲಿ ಚರ್ಚೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಕೇಂದ್ರ ಸರಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡು ಪ್ರಾಧಿಕಾರ ರಚನೆ ಮಾಡಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ಪ್ರಾಧಿಕಾರ ರಚನೆ ವಿಚಾರದಲ್ಲಿ ನಾವು ಕೆಲವು ಸಲಹೆ ಕೊಟ್ಟಿದ್ದೆವು. ಈ ಬಗ್ಗೆ ಚರ್ಚೆಯಾಗಬೇಕು ಎಂದು ಮನವಿಯನ್ನೂ ಮಾಡಿದ್ದೆವು. ಆದರೆ ಈಗ ಕರ್ನಾಟಕ್ ಬಿಟ್ಟು ಪ್ರಾಧಿಕಾರ ರಚನೆ ಮಾಡಲಾಗಿದೆ. ಕೇಂದ್ರದ ಪ್ರಾಧಿಕಾರ ರಚನೆ ನಿರ್ಧಾರ ಮರು ಪರಿಶೀಲಿಸುವಂತೆ ಮತ್ತೊಮ್ಮೆ ಪತ್ರ ಬರೆಯತ್ತೇವೆ. ಅಡ್ವೋಕೇಟ್ ಜನರಲ್ ಸಲಹೆ ಪಡೆದು ಮುಂದುವರೆಯುತ್ತೇವೆ. ಮತ್ತೊಮ್ಮೆ ಕೇಂದ್ರದ ನೀರಾವರಿ ಸಚಿವರ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ನಮ್ಮ ಸಹನೆಯೇ ದೌರ್ಬಲ್ಯ ಅಲ್ಲ. ಕರ್ನಾಟಕಕ್ಕೆ ಪ್ರಾಧಿಕಾರ ರಚನೆಯಿಂದ ಅನ್ಯಾಯವಾಗಿದೆ. ಈ ಬಗ್ಗೆ ಈಗಾಗಲೇ ನೀರಾಚರಿ ತಜ್ಞರಿಂದ ಸಲಹೆ ಪಡೆದಿದ್ದೇನೆ. ಕಾನೂನಿಗೆ ನಾವು ತಲೆ ಬಾಗಲೇಬೇಕು. ಆದರೆ ನಮ್ಮ ಸಹನೆ ದೌರ್ಬಲ್ಯ ಎಂದು ತಿಳಿಬೇಡಿ ಎಂದು ಕೇಂದ್ರಕ್ಕೆ ಎಚ್ಚರಿಸಿದ್ದಾರೆ.
ಕೇಂದ್ರ ನೀರಾವರಿ ಸಚಿವರನ್ನೂ ಸಂಪರ್ಕ ಮಾಡಿದ್ದೇನೆ. 15 ದಿನಗಳ ಒಳಗೆ ಭೇಟಿಗೆ ಅವಕಾಶ ಮಾಡಿಕೊಡ್ತೇವೆ ಎಂದಿದ್ದಾರೆ. ಕೇಂದ್ರದ ಸಂಬಂಧಪಟ್ಟವರಿಗೆ ಪತ್ರ ಬರಿತೇನೆ. ನೀರಾವರಿ ಸಚಿವರನ್ನೂ ಭೇಟಿ ಮಾಡಿ ಚರ್ಚೆ ಮಾಡ್ತೇನೆ. ಈ ವಿಷಯದಲ್ಲಿ ಯಾವುದೇ ರಾಜೀ ಎಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Cauvery Water Regulation Committee,Centre ignores Karnataka,CM H D Kumaraswamy