ರಾಜ್ಯದ ಹಣಕಾಸಿನ ಪರಿಸ್ಥಿತಿ ಅಧೋಗತಿಗಿಳಿದಿದೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಜು.21- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಲಭಾಗ್ಯದಿಂದಾಗಿ ರಾಜ್ಯಕ್ಕೆ ಆರ್ಥಿಕ ಹೊರೆಯಾಗಿತ್ತು. ಇದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಮುಂದುವರೆಸಿದ ಪರಿಣಾಮ ರಾಜ್ಯದ ಹಣಕಾಸಿನ ಪರಿಸ್ಥಿತಿ ಅಧೋಗತಿಗಿಳಿದಿದೆ ಎಂದು ಬಿಜೆಪಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಸಾಲದ ಹೊರೆಯನ್ನು 286476 ಕೋಟಿ ರೂ. ಹೆಚ್ಚಳ ಮಾಡಿದ್ದರು. ಕುಮಾರಸ್ವಾಮಿ ಇದನ್ನು 296229 ಕೋಟಿಗೆ ಏರಿಕೆ ಮಾಡಿದ್ದಾರೆ. ಇದು ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧನೆ ಎಂದು ಕುಹಕವಾಡಿದರು.

ಸಿದ್ದರಾಮಯ್ಯನವರು ಬೇಕಾಬಿಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ ಪರಿಣಾಮ ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿತ್ತು. ಈಗ ಕುಮಾರಸ್ವಾಮಿಯವರು ಅದೇ ಪರಿಪಾಠವನ್ನು ಮುಂದುವರೆಸಿರುವುದರಿಂದ ರಾಜ್ಯ ಮತ್ತಷ್ಟು ಸಾಲದ ಹೊರೆಗೆ ಗುರಿಯಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಮೀರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಉಭಯ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕುಮಾರಸ್ವಾಮಿ ಹೇಳಿದಂತೆ ನಾವು ಕೆಲ ದಿನಗಳವರೆಗೆ ಕಾದು ನೋಡುತ್ತೇವೆ ಬಳಿಕ ಸರ್ಕಾರದ ವಿರುದ್ದ ಬೀದಿಗಳಿಯುತ್ತೇವೆ ಎಂದು ಎಚ್ಚರಿಸಿದರು.

ಹಿಂದಿನ ಸರ್ಕಾರ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿದ್ದ , 8,500 ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಇರುವವರೆಗೆ ಸಹಕಾರಿ ಬ್ಯಾಂಕ್‍ಗಳಿಗೆ 4 ಸಾವಿರ ಕೋಟಿ ಹಣವನ್ನು ಮಾತ್ರ ಪಾವತಿಸಿದ್ದರು.
ಇಂದು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಸಾಲ ಚುಕ್ತ ಮಾಡದ ಕಾರಣ ಎಲ್ಲಿಯೂ ಸಾಲ ಸಿಗುತ್ತಿಲ್ಲ. ಹಿಂದಿನ ಸಾಲ ತೀರಿಸುವವರೆಗೂ ಹೊಸ ಸಾಲ ನೀಡುವುದಿಲ್ಲ ಎಂದು ಅಧಿಕಾರಿಗಳು ಕ್ಯಾತೆ ತೆಗೆಯುತ್ತಿದ್ದಾರೆ. ಹೀಗಾದರೆ ಅನ್ನದಾತ ಬದುಕುವುದಾದರೂ ಹೇಗೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ವಿವಿಧ ಕಾಮಗಾರಿಗಳ 10 ಸಾವಿರ ಕೋಟಿ ಬಾಕಿ ಹಣ ಹಾಗೆ ಉಳಿದಿದೆ. ಹಾಲಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ತಡೆ ಹಿಡಿಯಲಾಗಿದೆ. ಸುಮಾರು 730 ಕೋಟಿ ಹಣವನ್ನು ರೈತರಿಗೆ ನೀಡಬೇಕು.

ಸರ್ಕಾರದ ಹಣಕಾಸಿನ ಪರಿಸ್ಥಿತಿ ಭದ್ರವಾಗಿದೆಯೋ ಇಲ್ಲವೇ ದಿವಾಳಿಯಾಗಿದೆಯೇ ಎಂಬುದಕ್ಕೆ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.
ಸರ್ಕಾರ ರಚನೆಯಾಗಿ ಎರಡು ತಿಂಗಳ ಕಳೆದರೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿಲ್ಲ. ಅನೇಕ ಕಡೆ ಮಳೆ ಬಂದು ನೆರೆ ಹಾವಳಿ ಉಂಟಾಗಿವೆ. ಕಡೇ ಪಕ್ಷ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅವರ ಸಮಸ್ಯೆಯನ್ನು ಅಲಿಸಬಹುದಿತ್ತು. ಉಸ್ತುವಾರಿ ಮಂತ್ರಿಗಳು ಇಲ್ಲದ ಪರಿಣಾಮ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಬಿಎಸ್‍ವೈ ಹರಿಹಾಯ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಂದು 10 ಸಾವಿರ ಎಕರೆ ಜಲಾವೃತವಾಗಿದೆ. ಕಡೆ ಪಕ್ಷ ಜಿಲ್ಲಾಧಿಕಾರಿಯಾದರೂ ಬಂದು ಪರಿಸ್ಥಿತಿಯನ್ನು ಅವಲೋಕನ ಮಾಡಬಹುದಿತ್ತು. ಅದ್ಯಾವುದನ್ನು ಮಾಡದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.

ಪ್ರತಿಪಕ್ಷವಾಗಿ ನಾವು ರಚನಾತ್ಮಕ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಖಚಿ ಎಂದು ಎಚ್ಚರಿಕೆ ನೀಡಿದರು.
State economic situation fallen,B S Yeddyurappa,CM H D Kumaraswamy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ