
ಅಹಮದಾಬಾದ್: ರಾಬರಿ ಕಾಲೋನಿಯಲ್ಲಿ ತಾವು ನಡೆಸುತ್ತಿರುವ ಪಡಿತರ ಅಂಗಡಿ ಪಕ್ಕ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದಕ್ಕೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪ್ರಧಾನಿ ಮೋದಿ ಸಹೋದರನಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಹ್ಲಾದ್ ಮೋದಿ ಅವರು ನಡೆಸುತ್ತಿರುವ ನಿರ್ಮಾಣ ಕಾರ್ಯ ಅಕ್ರಮವಾಗಿದ್ದು, ನಿಲ್ಲಿಸುವಂತೆ 2 ಬಾರಿ ಸೂಚಿಸಿದ್ದೆವು. ಆದರೆ ಅವರಿದಕ್ಕೆ ಸ್ಪಂದಿಸಿಲ್ಲ, ಹೀಗಾಗಿ ನೋಟಿಸ್ ಜಾರಿ ಮಾಡಬೇಕಾಯಿತು, ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಪ್ರಧಾನಿ ಸಹೋದರರು ಕಾರ್ಪೋರೇಶನ್ ಅಧಿಕಾರಿಗಳ ಆರೋಪವನ್ನು ತಳ್ಳಿ ಹಾಕಿದ್ದು, ತಾವು ಈಗ ನಿರ್ಮಾಣ ಮಾಡುತ್ತಿರುವ ಕಟ್ಟಡ ಇದ್ದ ಜಾಗದಲ್ಲಿ ಶಿಥಿಲಗೊಂಡ ಕಟ್ಟಡವೊಂದಿತ್ತು. ಅದನ್ನು ಕೆಡವಲು ಅನುಮತಿ ನೀಡಬೇಕೆಂದು ನಾನು ಎಎಂಸಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಹಳೆಯದಾಗಿದ್ದ ಕಟ್ಟಡ ನೆಲಕಚ್ಚಿತು. ಹೀಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದೆ ಎಂದಿದ್ದಾರೆ.
ಎಲ್ಲ ನಿಯಮಗಳನ್ನು ಪಾಲಿಸಿ, ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಂಡಿದ್ದೇನೆ, ಆದರು ಕೂಡ ನೋಟಿಸ್ ಜಾರಿ ಮಾಡಲಾಗಿದೆ, ಎಂದವರು ಆರೋಪಿಸಿದ್ದಾರೆ.