ಚೆನ್ನೈ: ತಮಿಳುನಾಡಿನಲ್ಲಿ 18 ಮಂದಿ ಎಐಎಡಿಎಂಕೆ ಶಾಸಕರ ಅನರ್ಹತೆಯನ್ನು ಪ್ರಶ್ನಿಸಿದ ಅರ್ಜಿ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ಎರಡು ಭಿನ್ನ ನಿಲುವು ತಳೆದಿದೆ. ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು, ಶಾಸಕರನ್ನು ಅನರ್ಹಗೊಳಿಸಿದ ತಮಿಳುನಾಡು ಸ್ಪೀಕರ್ ಪಿ. ಧನಪಾಲ್ ಆದೇಶವನ್ನು ಎತ್ತಿಹಿಡಿದರೆ, ಜಸ್ಟಿಸ್ ಎಂ. ಸುಂದರ್ ಅವರು ಸ್ಪೀಕರ್ ಆದೇಶವನ್ನು ವಜಾಗೊಳಿಸಿದ್ದಾರೆ.
ಹೀಗಾಗಿ ಈ ಪ್ರಕರಣವನ್ನು 3ನೇ ನ್ಯಾಯಾಧೀಶರಿಗೆ ವಹಿಸಲಾಗಿದ್ದು, ಅವರ ಅಭಿಪ್ರಾಯ ಆಧರಿಸಿ ತೀರ್ಪು ಹೊರಬೀಳಲಿದೆ.
ತೀರ್ಪು ಯಾವುದೇ ರೀತಿ ಬಂದರೂ ಸರಕಾರ ಇಕ್ಕಟ್ಟಿಗೆ ಸಿಲುಕಲಿದೆ. ಅನರ್ಹತೆಯನ್ನು ಎತ್ತಿ ಹಿಡಿದರೆ, 18 ವಿಧಾನಸಭಾ ಕ್ಷೇತ್ರಗಳಿಗೆ ಮರು ಚುನಾವಣೆ ಅನಿವಾರ್ಯವಾಗಲಿದೆ. ಒಂದು ವೇಳೆ ಚುನಾವಣೆಯಲ್ಲಿ ಆ ಕ್ಷೇತ್ರಗಳನ್ನು ಡಿಎಂಕೆ ಗೆದ್ದುಕೊಂಡರೆ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರಕಾರ ಅಲ್ಪಮತಕ್ಕೆ ಕುಸಿಯಲಿದೆ.
ಅನರ್ಹತೆಯನ್ನು ಕೋರ್ಟ್ ರದ್ದುಪಡಿಸಿದರೆ, ಆಗಲೂ ಸರಕಾರಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು. ಈ ಶಾಸಕರು ಡಿಎಂಕೆ ಜತೆ ಕೈಜೋಡಿಸಿ ಸರಕಾರವನ್ನು ಉರುಳಿಸಲು ಯತ್ನಿಸಬಹುದು. ಅಥವಾ ಕೆಲವು ಶಾಸಕರು ಸರಕಾರವನ್ನು ಬೆಂಬಲಿಸಿ ಅದನ್ನು ಉಳಿಸಲೂಬಹುದು.
ಕಳೆದ ಸೆಪ್ಟೆಂಬರ್ 18ರಂದು ಎಐಎಡಿಎಂಕೆ ಪಕ್ಷದ ಸಚೇತಕ ಎಸ್. ರಾಜೇಂದ್ರನ್ ಸಲ್ಲಿಸಿದ ದೂರು ಆಧರಿಸಿ ಸ್ಪೀಕರ್ 18 ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದ್ದರು.
ಸ್ಪೀಕರ್ ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ಅನರ್ಹಗೊಂಡ ಶಾಸಕರು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಸೆಪ್ಟೆಂಬರ್ 20ರಂದು ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಏಕಸದಸ್ಯ ಪೀಠ, ಸದನದಲ್ಲಿ ಬಲಾಬಲ ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಅಲ್ಲದೆ ಈ ಶಾಸಕರ ಕ್ಷೇತ್ರಗಳು ತೆರವಾಗಿವೆ ಎಂದು ಘೋಷಿಸದಂತೆ ಹಾಗೂ ಮರು ಚುನಾವಣೆ ನಡೆಸದಂತೆ ಚುನಾವಣೆ ಆಯೋಗಕ್ಕೂ ನಿರ್ದೇಶಿಸಿತ್ತು.
ಈ ಅರ್ಜಿಗಳು ಸಾಂವಿಧಾನಿಕ ವಿಷಯಗಳನ್ನು ಒಳಗೊಂಡಿರುವುದರಿಂದ, ಅವುಗಳನ್ನು ಮುಖ್ಯ ನ್ಯಾಐಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಹಲವು ವಾರಗಳ ಕಾಲ ನಡೆದ ಸುದೀರ್ಘ ವಿಚಾರಣೆಯ ಬಳಿಕ ಮೊದಲ ಪೀಠ ತನ್ನ ತೀರ್ಪನ್ನು ಜನವರಿ 23ಕ್ಕೆ ಕಾಯ್ದಿರಿಸಿತ್ತು.