ರೈತರ ಖಾತೆಗೆ ಜಮಾ ಆಗದ ಫಸಲ್ ಭಿಮಾ ಯೋಜನೆಯ ವಿಮಾ ಹಣ

ಕೊಪ್ಪಳ ಜೂನ್ 14: ಫಸಲ್ ಭಿಮಾ ಯೋಜನೆಯಡಿ ಕೇಂದ್ರ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಆದರೆ ಅದನ್ನು ಸಕಾಲದಲ್ಲಿ ರೈತರ ಖಾತೆಗೆ ರಾಜ್ಯ ಸರ್ಕಾರ ಜಮಾ ಮಾಡುವಲ್ಲಿ ವಿಳಂಬ ಮಾಡಿದೆ. ರಾಜ್ಯ ಸರ್ಕಾರ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಇದು ತರವಲ್ಲ, ಹೀಗೆ ಮುಂದುವರಿದರೆ ಹೋರಾಟ ಮಾಡಲಾಗುವುದು. ಕೂಡಲೇ ಜಿಲ್ಲೆಯ ಎಲ್ಲಾ ರೈತರ ವಿಮಾ ಹಣ ಬಿಡುಗಡೆ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಳೆದ ೨೦೧೬ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೩೮೫೩೦ ರೈತರು ವಿಮಾ ಯೋಜನೆಯಡಿ ನೋಂದಣಿ ಮಾಡಿಸಿದ್ದರು. ಇದಕ್ಕಾಗಿ ೫೮,೫೨,೮೧,೦೦೦ ಫಸಲ್ ಭಿಮಾ ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯ ಸರ್ಕಾರ ೩೪,೪೩೩ ರೈತರಿಗೆ ಒಟ್ಟು ೫೩,೨೫,೨೧,೦೦೦ ಹಣ ಖಾತೆಗೆ ಜಮಾ ಮಾಡಿದೆ. ಆದರೆ ೪,೦೯೭ ರೈತರಿಗೆ ಇನ್ನು ೫.೨೭ ಕೋಟಿ ಹಣ ಜಮಾ ಆಗಬೇಕಿದೆ. ಈ ಹಣವನ್ನು ಕೂಡಲೇ ಜಮಾ ಮಾಡಬೇಕು.

ಇನ್ನು ೨೦೧೬ರ ಹಿಂಗಾರು ಬೆಳೆಯ ವಿಮಾ ಪೈಕಿ ೬೫,೫೨೦ ರೈತರ ೭೭,೫೧,೧೯,೦೦೦ ಕೋಟಿ ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಮಾತ್ರ ಜಮಾ ಮಾಡಿಲ್ಲ. ಇದರೊಂದಿಗೆ ೨೦೧೭ರ ಮುಂಗಾರು ಹಂಗಾಮಿನಲ್ಲಿ ೭೨೫೮ ರೈತರ ೮,೭೦,೧೩,೦೦೦ ಕೋಟಿ ಹಣವನ್ನು ಇದುವರೆಗೂ ರಾಜ್ಯ ಸರ್ಕಾರ ನೀಡದಿರುವುದು ಖಂಡನೀಯ. ಯುಐಐ ಕಂ.ಲಿಮಿಟೆಡ್ ವಿಮಾ ಕಂಪನಿಗೆ ಕೊಪ್ಪಳ ಜಿಲ್ಲೆಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲಾ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಅದನ್ನು ತನ್ನಲ್ಲಿಯೇ ಇಟ್ಟುಕೊಂಡು ಕುಳಿತಿದೆ. ಇದರಿಂದಾಗಿ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಈ ಎಲ್ಲಾ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದರಾದ ಕರಡಿ ಸಂಗಣ್ಣ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯ ರೈತರು ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ. ಅವರಿಗೆ ವಿಮಾ ಹಣ ದೊರೆತರೆ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಹಣ ನೀಡಲು, ಇತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಾಯವಾಗುತ್ತದೆ. ಇಲ್ಲವಾದರೆ ಸಾಲಸೋಲ ಮಾಡಿ ಒಕ್ಕಲುತನ ಮಾಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ರೈತರನ್ನು ಸಾಲದ ಕೂಪಕ್ಕೆ ತಳ್ಳುವ ಬದಲು, ಕೂಡಲೇ ವಿಮಾ ಹಣ ಜಮಾ ಮಾಡಿ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ