ಬಂಗಲೆ ಹಾನಿ ವರದಿ ಹಿಂದೆ ಬಿಜೆಪಿ ಸಂಚು: ಅಖಿಲೇಶ್

ಲಖನೌ: ‘ಸರ್ಕಾರಿ ಬಂಗಲೆಗೆ ಹಾನಿ ಮಾಡಿದ್ದೇನೆ ಎನ್ನುವ ವರದಿ ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಬಿಜೆಪಿ ಸಂಚು’ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
‘ಅಖಿಲೇಶ್ ತೆರವುಗೊಳಿಸಿದ ನಂ. 4, ವಿಕ್ರಮಾದಿತ್ಯ ಮಾರ್ಗ್ ಬಂಗಲೆಗೆ ಹಾನಿ ಮಾಡಲಾಗಿದೆ ಎನ್ನುವ ವರದಿ ಮಾಧ್ಯಮಗಳಲ್ಲಿ ಹಾಗೂ ಜನಸಾಮಾ
ನ್ಯರಲ್ಲಿ ಹರಿದಾಡುತ್ತಿದೆ’ ಎಂದು ರಾಜ್ಯಪಾಲ ರಾಮ ನಾಯ್ಕ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ವಿರುದ್ಧ ಹರಿಹಾಯ್ದಿರುವ ಅಖಿಲೇಶ್, ಅವರದ್ದು ‘ಆರ್‌ಎಸ್‌ಎಸ್‌ ಆತ್ಮ’ ಎಂದು ಹೇಳಿದ್ದಾರೆ.
‘ನಾನು ತೆರವುಗೊಳಿಸಿದ ಬಂಗಲೆಯನ್ನು ಮಾಧ್ಯಮಗಳಲ್ಲಿ ತೋರಿಸುವ ಮೊದಲು, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಅಭಿಷೇಕ್ ಕೌಶಿಕ್ ಹಾಗೂ ಐಎಎಸ್ ಅಧಿಕಾರಿ ಮೃತ್ಯುಂಜಯ ನಾರಾಯಣ ಅವರು ಏಕೆ ಬಂಗಲೆ ಪ್ರವೇಶಿಸಿದರು ಎಂದು ಸರ್ಕಾರವನ್ನು ಪ್ರಶ್ನಿಸಲು ಬಯಸುತ್ತೇನೆ’ ಎಂದಿದ್ದಾರೆ.
‘ಅವರು ಬಂಗಲೆಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, ನಾನು ಯಾವ ವಸ್ತುಗಳನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ಹೇಳಲಿ. ತಕ್ಷಣವೇ ಅವುಗಳನ್ನು ಹಿಂದಿರುಗಿಸುತ್ತೇನೆ. ಬಂಗಲೆಗಾಗಿ ನಾನು ₹42 ಕೋಟಿ ವೆಚ್ಚ ಮಾಡಿದ್ದೇನೆ, ಅಲ್ಲಿದ್ದ ಈಜುಕೊಳವನ್ನು ಬಂಗಲೆ ತೆರವುಗೊಳಿಸುವ ಮೊದಲು ಮುಚ್ಚಿಹಾಕಿದ್ದೇನೆ ಎಂದೆಲ್ಲಾ ಕೆಲವರು ಹೇಳುತ್ತಿದ್ದಾರೆ. ನಾನು ಪುನಃ ಅಲ್ಲಿಗೆ ಹೋಗಲು ಸಿದ್ಧನಿದ್ದೇನೆ. ಈಜುಕೊಳ ಎಲ್ಲಿದೆ ಎಂದು ನನಗೆ ತೋರಿಸಲಿ. ವರದಿಗಾಗಿ ಕಾಯುತ್ತಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.
‘ಗೋರಖ್‌ಪುರ, ಫೂಲ್ಪುರ, ಕೈರಾನಾ ಹಾಗೂ ನೂರ್‌ಪುರ ಉಪಚುನಾವಣೆಗಳಲ್ಲಿ ಹೀನಾಯ ಸೋಲನುಭವಿಸಿದ ಬಳಿಕ ಬಿಜೆಪಿ ಇಂತಹ ಸಂಚು ಮಾಡುತ್ತಿದೆ’ ಎಂದು ಅಖಿಲೇಶ್‌ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ