ಬೆಂಗಳೂರು, ಮೇ 31- ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣಿಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ ಮಾಡುವ ಸಂಚು ರೂಪಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದರು.
ಸದಾಶಿವನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ಮಾಡಿದ ಅವರು, ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಟಾರ್ಗೆಟ್ ಮಾಡಿದೆ. ಸಿಬಿಐನವರು 11 ಕಡೆ ನಮ್ಮ ಆಪ್ತರ ವಿರುದ್ಧ ಸರ್ಚ್ ವಾರೆಂಟ್ ಪಡೆದಿರುವ ಬಗ್ಗೆ ಮಾಹಿತಿ ನಮಗೆ ಸಿಕ್ಕಿದೆ. ಅವರ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಐಟಿ ದುರ್ಬಳಕೆಯಾಗಿರುವುದನ್ನು ನಾವು ಕಾಣಬಹುದು. ಐಟಿ ಮೂಲಕ ಬೆದರಿಕೆ ಹಾಕಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದರು.
ನಮ್ಮ ಕುಟುಂಬದ ಮೇಲೆ ಸರ್ಚ್ ವಾರೆಂಟ್ ಪಡೆದು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಮಾಡಿಸುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು.
ಅವರ ಧೂತರ ಮೂಲಕ ನನಗೆ ಹಾಗೂ ನನ್ನ ಸಹೋದರ ಡಿ.ಕೆ.ಶಿವಕುಮಾರ್ ಮೇಲೆ ಬೆದರಿಕೆ ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಬಳಕೆ ಮಾಡಿ ಡಿಕೆಶಿ ಕುಟುಂಬದ ಮೇಲೆ ಬೆದರಿಕೆ ಹಾಕಲಾಗುತ್ತಿದೆ. ಅವರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಮ್ಮ ಮೇಲೆ ಯಾವ ಕೇಸ್ ಆಧಾರ ಇಟ್ಟುಕೊಂಡು ಸರ್ಚ್ ವಾರೆಂಟ್ ಪಡೆದಿದ್ದಾರೆಂದು ಗೊತ್ತಾಗಿಲ್ಲ. ಮೈನ್ ಟಾರ್ಗೆಟ್ ನಾನು ಮತ್ತು ಡಿ.ಕೆ.ಶಿವಕುಮಾರ್.
ಇದರ ಜತೆಗೆ ಕುಟುಂಬದ ನಮ್ಮ 11 ಮಂದಿಯ ಮೇಲೆ ಸರ್ಚ್ ವಾರೆಂಟ್ ಪಡೆದಿದ್ದಾರೆಂದು ಗೊತ್ತಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಈವರೆಗೆ ನಮಗೆ ಯಾವುದೇ ವಾರೆಂಟ್ ಬಂದಿಲ್ಲ. ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಶರಣಾಗುವ ಮಾತೇ ಇಲ್ಲ ಎಂದು ಹೇಳಿದರು.
ನಾವು ಯಾವುದೇ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿನೊಳಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಕೃತ್ಯ. ರಾಜಕೀಯವಾಗಿ ನಮ್ಮನ್ನು ಮಣಿಸಲು ಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ನ್ಯಾಯಬದ್ಧ ಬದುಕು ಹಾಗೂ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ರಾಜಕೀಯ ಉದ್ದೇಶ ಇಟ್ಟುಕೊಂಡು ನಮಗೆ ಬೆಂಬಲ ಕೊಟ್ಟ ಕುಟುಂಬದವರಿಗೆ ಚಿತ್ರಹಿಂಸೆ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಸುಳ್ಳು ಕೇಸು ಮೂಲಕ ಜೈಲಿಗೆ ಕಳುಹಿಸುತ್ತೇವೆ ಎನ್ನುವುದು ನಿಮ್ಮ ಭ್ರಮೆ. ನಮಗೆ ಯಾರು ರಕ್ಷಣೆ ಕೊಡುತ್ತಾರೆ ಎಂಬುದು ಬೇರೆ ವಿಚಾರ. ನಮಗೆ ಭಗವಂತ ಇದ್ದಾನೆ ಎಂಬ ನಂಬಿಕೆ ಇದೆ. ನಮ್ಮ ಜನ ಇದ್ದಾರೆ. ಸರ್ಚ್ ವಾರೆಂಟ್ ಸುದ್ದಿ ತಿಳಿದು ಜನರು ನಮ್ಮ ಮನೆ ಮುಂದೆ ದೌಡಾಯಿಸಿದ್ದಾರೆ. ಇವರೇ ನಮಗೆ ಆಸ್ತಿ ಎಂದರು.