ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ತಂಗಿ, ಕೋಪಗೊಂಡ ಅಣ್ಣ ಆಕೆಯ ಹತ್ಯೆಗೆ ಯತ್ನ

ಹಾಸನ, ಮೇ 31- ಮನೆಯವರ ವಿರೋಧದ ನಡುವೆ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ತಂಗಿ ಇದೀಗ ತಂದೆಯ ಆಸ್ತಿಯಲ್ಲಿ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರಿಂದ ಕೋಪಗೊಂಡ ಅಣ್ಣ ಆಕೆಯ ಹತ್ಯೆಗೆ ಯತ್ನಿಸಿರುವ ಘಟನೆ ಯಸಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಹೆತ್ತೂರಿನ ನಿವಾಸಿ ಲತಾ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ವರ್ಷಗಳ ಹಿಂದೆ ಲತಾ ಮನೆಯವರ ವಿರೋಧದ ನಡುವೆಯೂ ಅದೇ ಗ್ರಾಮದ ಪ್ರೇಮಾನಂದ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದು, ಅಂದಿನಿಂದ ತವರು ಮನೆಯವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಇತ್ತೀಚೆಗೆ ತಂದೆಯ ಆಸ್ತಿಯಲ್ಲಿ ಪಾಲುಬೇಕೆಂದು ಲತಾ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‍ನಿಂದ ಈಕೆಯ ಅಣ್ಣ ಚಂದ್ರಶೇಖರ್‍ಗೆ ನೋಟಿಸ್ ಬಂದಿತ್ತು.
ನೋಟಿಸ್‍ನಿಂದ ಕುಪಿತಗೊಂಡ ಅಣ್ಣ ಚಂದ್ರಶೇಖರ್ ತಂಗಿ ಲತಾಳೊಂದಿಗೆ ಜಗಳವಾಡಿದ್ದಾನೆ. ನಿನ್ನೆ ಮಧ್ಯಾಹ್ನ ಅಣ್ಣ-ತಂಗಿ ನಡುವೆ ಆಸ್ತಿ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿದೆ.
ಸಹನೆ ಕಳೆದುಕೊಂಡ ಚಂದ್ರಶೇಖರ್ ತಂಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಾರಿನಿಂದ ಡಿಕ್ಕಿ ಹೊಡೆಸಿ ನೆಲಕ್ಕೆ ಬಿದ್ದ ತಂಗಿ ಮೇಲೆ ಆಯುಧದಿಂದ ಮುಖಕ್ಕೆ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ಗಂಭೀರಗಾಯಗೊಂಡು ಕುಸಿದು ಬಿದ್ದ ಲತಾಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ