ಬೆಂಗಳೂರು, ಮೇ 30-ವೇತನ ಪಾವತಿಗೆ ಒತ್ತಾಯಿಸಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪೌರಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ನೇತೃತ್ವದಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ತಕ್ಷಣ ವೇತನ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳನ್ನು ಆಗ್ರಹಿಸಿದರು.
ಬಯೋಮೆಟ್ರಿಕ್ ಆಧಾರಿತ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಸುಮಾರು ಅರ್ಧದಷ್ಟು ಪೌರಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ. ಕೆಲ ವಾರ್ಡ್ಗಳಲ್ಲಿ 10 ರಿಂದ 30, ಮತ್ತೆ ಕೆಲವು ವಾರ್ಡ್ಗಳಲ್ಲಿ 30 ರಿಂದ 50 ಪೌರಕಾರ್ಮಿಕರಿಗೆ ವೇತನ ನೀಡಿಲ್ಲ. ಪ್ರಸ್ತುತ ಬಯೋಮೆಟ್ರಿಕ್ ಹಾಜರಾತಿಯಿಂದ 18 ಸಾವಿರ ಜನ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.70ರಷ್ಟು ಮಂದಿ ವೇತನ ಪಡೆದಿದ್ದಾರೆ. ಉಳಿದವರಿಗೆ ಈವರೆಗೆ ವೇತನ ಬಂದಿಲ್ಲ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಬಯೋಮೆಟ್ರಿಕ್ ಹಾಜರಾತಿ ಪ್ರಕಾರ ಬೇನಾಮಿ ಪೌರಕಾರ್ಮಿಕರಿಗೂ ಸಹ ಅಧಿಕಾರಿಗಳು ಶಾಮೀಲಾಗಿ ವೇತನ ಪಾವತಿಸಲಾಗುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮತೆಗೆದುಕೊಂಡು ಅರ್ಹ ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು, ಬೇನಾಮಿ ಪೌರಕಾರ್ಮಿಕರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಶಾಲಾ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಮಕ್ಕಳ ಶುಲ್ಕ ಪಾವತಿಸಲು, ಮನೆ ಬಾಡಿಗೆ ಕಟ್ಟಲು ಹಣವಿಲ್ಲದಂತಾಗಿದೆ. ಆದ್ದರಿಂದ ಜನವರಿ ತಿಂಗಳಿನಿಂದ ಈ ತಿಂಗಳವರೆಗೆ ನೀಡಬೇಕಾಗಿರುವ ವೇತನವನ್ನು ಬಿಡುಗಡೆ ಮಾಡಬೇಕೆಂದು ಪೌರಕಾರ್ಮಿಕರು ಆಗ್ರಹಿಸಿದರು.