ಚುನಾವಣೆಗೆ ಬಳಸುವ ಇವಿಎಂ ಯಂತ್ರಗಳ ಅಕ್ರಮಕ್ಕೆ ಅವಕಾಶವಿಲ್ಲ: ಬಿಇಎಲ್‍ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ್

 

ಬೆಂಗಳೂರು, ಮೇ 30-ಚುನಾವಣೆಗೆ ಬಳಸುವ ಇವಿಎಂ ಯಂತ್ರಗಳ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಬಿಇಎಲ್‍ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಪ್ರಮುಖ ಪರೀಕ್ಷೆಗಳಿಗೆ ಒಳಪಡಿಸಿದ ನಂತರವೇ ಇವಿಎಂ ಯಂತ್ರಗಳನ್ನು ವಿಲೇವಾರಿ ಮಾಡಲಾಗುತ್ತದೆ. ಎರಡು-ಮೂರು ಹಂತಗಳಲ್ಲಿ ಅತ್ಯುನ್ನತ ಮಟ್ಟದ ಪರೀಕ್ಷೆಗೆ ಒಳಪಡಿಸುವುದಲ್ಲದೆ, ಉನ್ನತ ತಂತ್ರಜ್ಞಾನವನ್ನು ಅದಕ್ಕೆ ಅಳವಡಿಸಲಾಗಿದೆ ಎಂದು ಹೇಳಿದರು.
ದೂರದ ಪ್ರದೇಶಗಳಿಗೆ ಸಾಗಿಸುವಾಗ ಅಥವಾ ಸಾಗಿಸಿದ ನಂತರ ಸಣ್ಣಪುಟ್ಟ ದೋಷಗಳು ಕಂಡುಬರಬಹುದು. ಅದು ನಮ್ಮ ಕೈ ಮೀರಿದ್ದು. ಅಂತಹ ಯಾವುದೇ ತೊಂದರೆಗಳು ಕಂಡುಬರದಂತೆ ನೋಡಿಕೊಳ್ಳಲು ಆಳವಾದ ಅಧ್ಯಯನ ನಡೆಸಲಾಗುತ್ತಿದೆ ಎಂದ ಅವರು, ಮತದಾನದ ನಂತರ ಮತ ಹಾಕಿರುವುದರಲ್ಲಿನ ವ್ಯತ್ಯಾಸ ಇನ್ನಿತರ ಯಾವುದೇ ತೊಂದರೆ ಇವಿಎಂಗಳಲ್ಲಿ ಕಂಡುಬರುವುದಿಲ್ಲ. ಇದರಿಂದ ಸೂಕ್ತ ಫಲಿತಾಂಶ ಬರಲು ಅಡಚಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ ಇವಿಎಂ ಯಂತ್ರಗಳ ಕೇಬಲ್, ಪ್ರಿಂಟರ್, ಎಲ್‍ಸಿಡಿಗಳು ಡ್ಯಾಮೇಜ್ ಆಗಬಹುದು. ಸ್ಥಳೀಯವಾಗಿ ಮೋಲ್ಡೆಡ್ ಪ್ಲಾಸ್ಟಿಕ್‍ನಿಂದ ನಿರ್ಮಿಸಿರುವುದರಿಂದ ತೊಂದರೆಗೀಡಾಗುವ ಸಾಧ್ಯತೆ ಇದೆ. ಆದರೆ ಬೇರೆ ರೀತಿಯ ತೊಂದರೆಯಾಗದು ಎಂದು ಹೇಳಿದರು.
ಆದರೆ ಈ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳು ಆರೋಪ ಮಾಡುತ್ತವೆ. ಸೋತವರು ಮಾತನಾಡುತ್ತಾರೆ, ಗೆದ್ದವರು ಮಾತನಾಡುವುದಿಲ್ಲ. ಆದರೆ ಈ ಬಾರಿ ಎಲ್ಲಾ ರಾಷ್ಟ್ರೀಯಪಕ್ಷಗಳಿಗೂ ಆಹ್ವಾನಿಸಿದ್ದೆವು. ಆದರೆ ಎರಡೇ ಎರಡು ಪಕ್ಷಗಳು ಮಾತ್ರ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವು. ಉಳಿದ ಪಕ್ಷಗಳು ಪಾಲ್ಗೊಳ್ಳಲಿಲ್ಲ. ಇವಿಎಂ ಯಂತ್ರಗಳ ಗುಣಮಟ್ಟದಲ್ಲಿ ಯಾವುದೇ ಅನುಮಾನವಿಲ್ಲ ಎಂದು ನುಡಿದರು.
ಈ ಬಾರಿಯೂ 3500 ಕೋಟಿ ರೂ. ಮೊತ್ತದ ಇವಿಎಂ ಯಂತ್ರಗಳ ನಿರ್ಮಾಣಕ್ಕೆ ಆದೇಶ ದೊರೆತಿದೆ. ನಮ್ಮ ಮತಯಂತ್ರಗಳ ಬಗ್ಗೆ ನಮಗೆ ಖಾತ್ರಿಯೂ ಇದೆ. ನಮಿಬಿಯಾದ ಚುನಾವಣೆಯಲ್ಲೂ ನಮ್ಮ ಮತಯಂತ್ರಗಳನ್ನು ಬಳಸಲಾಗಿತ್ತು. ನೇಪಾಳದಲ್ಲೂ ಈ ಯಂತ್ರಗಳನ್ನು ಬಳಸಲು ಮುಂದಾಗಿದ್ದರು ಆದರೆ ಅಷ್ಟೊಂದು ದೊಡ್ಡ ಮಟ್ಟದ ಯಂತ್ರಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವರ ಬೇಡಿಕೆ ಈಡೇರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ