ಬೆಂಗಳೂರು, ಮೇ 28- ಜೆಡಿಎಸ್ಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಒಂದೊಂದೇ ಷರತ್ತುಗಳನ್ನು ವಿಧಿಸಲು ಮುಂದಾಗಿದೆ. 30-30 ತಿಂಗಳು ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಕಾಂಗ್ರೆಸ್ ಮುಂದಿಟ್ಟಿರುವುದು ಕೇಳಿ ಬಂದಿದೆ.
ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿ ಜೆಡಿಎಸ್ಗೆ ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ತೀರ್ಮಾನಿಸಿತ್ತು.
ಅದರಂತೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧಿಕಾರ ಸ್ವೀಕರಿಸಿದ್ದರು. ಈಗ ಸಂಪುಟ ವಿಸ್ತರಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವದೆಹಲಿಗೆ ತೆರಳಿದ್ದು , ಇಂದು ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಭೇಟಿ ಮಾಡಿದಾಗ ಅವರು 30 ತಿಂಗಳ ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಕಾಂಗ್ರೆಸ್ಗೂ 30 ತಿಂಗಳ ಅಧಿಕಾರವನ್ನು ಬಿಟ್ಟು ಕೊಡಬೇಕೆಂಬ ಪ್ರಸ್ತಾಪವನ್ನು ಗುಲಾಂ ನಬಿ ಆಜಾದ್ ಅವರು ಕುಮಾರಸ್ವಾಮಿ ಅವರ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೈತ್ರಿ ಒಪ್ಪಂದದ ಸಂದರ್ಭದಲ್ಲಿ ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಂದುವರೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕಾಂಗ್ರೆಸ್ನವರು ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಮುಂದಿಟ್ಟಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇದಲ್ಲದೆ ಹಣಕಾಸು ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ತಮಗೇ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಬೇಷರತ್ ಬೆಂಬಲ ಎಂದು ಆರಂಭದಲ್ಲಿ ಘೋಷಿಸಿ ಈಗ ಜೆಡಿಎಸ್ನ ಮೇಲೆ ಒಂದೊಂದೇ ಷರತ್ತುಗಳನ್ನು ವಿಧಿಸುತ್ತಿದೆ.
ಇನ್ನು ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಸರ್ಕಾರ ಟೇಕ್ ಆಫ್ ಆಗಿಲ್ಲ. ಈಗಲೇ ಇಂತಹ ಷರತ್ತುಗಳ ಬಗ್ಗೆ ಮಾತುಗಳು ಕೇಳಿ ಬಂದಿವೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.