ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು,ಮೇ 28-ರೈತರು ಬ್ಯಾಂಕ್‍ಗಳಿಂದ ಪಡೆದಿರುವ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಬಿಜೆಪಿ ಪ್ರಾಬಲ್ಯವಿರುವ ಕರಾವಳಿ, ಮಧ್ಯಕರ್ನಾಟಕ, ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕದಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಬಂದ್‍ಗೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗದೆ ಎಂದಿನಂತೆ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬಂದ್‍ಗೆ ಅವಕಾಶ ನೀಡಿರಲಿಲ್ಲ.
ಮಿಶ್ರ ಪ್ರತಿಕ್ರಿಯೆ:
ಇಂದು ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ, ಮಧ್ಯಕರ್ನಾಟಕ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮುಂಬೈ ಕರ್ನಾಟಕದ ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರು ಸೇರಿದಂತೆ ಮತ್ತಿತರ ಕಡೆ ಪ್ರತಿಭಟನಾನಿರತರು ಬಸ್ ಸಂಚಾರ ತಡೆದರು.
ಆದರೆ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಖಾಸಗಿ ಕಂಪನಿಗಳು ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ರಜೆ ನೀಡಿರಲಿಲ್ಲ. ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲಿತ್ತು.
ಕೆಲವೊಂದು ಕಡೆ ಮಾತ್ರ ಬೇರೊಂದು ಸ್ಥಳಕ್ಕೆ ಹೊರಟಿದ್ದ ಬಸ್‍ಗಳನ್ನು ತಡೆಹಿಡಿಯಲಾಯಿತು.ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಉಳಿದಂತೆ ಟ್ಯಾಕ್ಸಿ , ಖಾಸಗಿ ಬಸ್‍ಗಳ ಸಂಚಾರವು ಸಹಜ ಸ್ಥಿತಿಯಲ್ಲಿ ಕಂಡುಬಂದಿತು.
ಬಂಧನ:
ಕರ್ನಾಟಕ ಬಂದ್‍ಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎನ್.ನಾಗೇಂದ್ರ, ಎಸ್.ಎ.ರಾಮದಾಸ್ ಸೇರಿದಂತೆ ಮತ್ತಿತರರನ್ನು ಪೆÇಲೀಸರು ವಶಕ್ಕೆ ಪಡೆದರು.
ಬಂದ್‍ಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮೈಸೂರಿನ ಪ್ರಮುಖ ಬಸ್ ನಿಲ್ದಾಣದ ಬಳಿ ವಾಹನಗಳನ್ನು ತಡೆಯಲು ಯತ್ನಿಸಿದಾಗ ಮುನ್ನೆಚ್ಚರಿಕೆ ಕ್ರಮವಾಗಿ ಪೆÇಲೀಸರು ಅವರನ್ನು ವಶಕ್ಕೆ ಪಡೆದರು.
ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಕಾರ್ಯಕರ್ತರು, ಬಸ್ ನಿಲ್ದಾಣ ಹಾಗೂ ಪ್ರಮುಖ ನಿಲ್ದಾಣಗಳಲ್ಲಿ ವಾಹನಗಳನ್ನು ತಡೆ ಹಿಡಿದಿರುವ ಘಟನೆಯೂ ನಡೆದಿದೆ.
ಕೆಲವು ಕೆಡಿಗೇಡಿಗಳು ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.
ಇಂದಿರಾ ಕ್ಯಾಂಟೀನ್‍ಗೆ ಕಲ್ಲು:
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಿ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ. ಈ ಸಂಬಂಧ ಇಬ್ಬರು ಕಿಡಿಗೇಡಿಗಳನ್ನು ಪೆÇಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬೀದರ್‍ನಲ್ಲಿ ಸಂಸದ ಮಲ್ಲಿಕಾರ್ಜುನ ಖೂಬ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಳ್ದಾಳ ಶೈಲೇಂದ್ರ ಸೇರಿದಂತೆ ಮತ್ತಿತರ ಕಾರ್ಯಕರ್ತರು ಬಲವಂತವಾಗಿ ಬಸ್ ತಡೆಯುವ ಪ್ರಯತ್ನ ನಡೆಸಿದರು.
ಕೂಡಲೇ ಪೆÇಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು.
ಗಡಿ ಜಿಲ್ಲೆ ಕಲ್ಬುರ್ಗಿ, ಯಾದಗಿರಿಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ಎಲ್ಲ ಕಡೆ ಜನಜೀವನ, ವಾಹನ ಸಂಚಾರ, ವಾಣಿಜ್ಯ-ವಹಿವಾಟು ಸೇರಿದಂತೆ ಎಲ್ಲ ಚಟುವಟಿಕೆಗಳು ಎಂದಿನಂತಿದ್ದವು.
ಇನ್ನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ ಕಡೆ ಬಂದ್‍ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿತು.
ಸಂಸದನಿಂದ ಅತಿರೇಕದ ವರ್ತನೆ:
ಇನ್ನು ಪ್ರತಿಭಟನೆ ವೇಳೆ ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಹಾಗೂ ಅವರ ಪುತ್ರ ಪೆÇಲೀಸ್ ಅಧಿಕಾರಿಯೊಬ್ಬರನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಕೊಪ್ಪಳ ನಗರ ಪೆÇಲೀಸ್ ಠಾಣೆ ಮುಂಭಾಗದಲ್ಲಿ ಸಂಸದ ಕರಡಿ ಸಂಗಣ್ಣ ಅವರ ಪುತ್ರ ಅಮರೇಶ್ ಕರಡಿ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಡಿವೈಎಸ್ಪಿ ಸಂದಿಗವಾಡ್ ಅವರ ಕೊರಳಪಟ್ಟಿಯನ್ನು ಕರಡಿ ಸಂಗಣ್ಣ ಹಿಡಿದು ಎಳೆದರೆ ಅವರ ಪುತ್ರನು ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಹಂತದಲ್ಲಿ ಪೆÇಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ಉಂಟಾಗಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಜಧಾನಿಯಲ್ಲಿ ಬಂದ್ ಠುಸ್:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಂದ್‍ನ ಯಾವ ಪರಿಣಾಮವೂ ಕಂಡುಬರಲಿಲ್ಲ.
ಬಂದ್ ನಡೆಸದಂತೆ ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ನಿನ್ನೆಯೇ ಆದೇಶ ಹೊರಡಿಸಿದ್ದರು. ಇದರಿಂದ ಬೆಂಗಳೂರಿನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.
ನಗರ ಸಾರಿಗೆ, ಟ್ಯಾಕ್ಸಿ, ವೋಲ್ವೊ, ಊಬರ್, ಮೆಟ್ರೊ, ಕೆಎಸ್‍ಆರ್‍ಟಿಸಿ, ರೈಲು ಸಂಚಾರ ಎಲ್ಲವೂ ಸುಗಮ ಸ್ಥಿತಿಯಲ್ಲಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ