ಹೊಸದಿಲ್ಲಿ,ಮೇ 22
ಕೇರಳದಲ್ಲಿ ಈಗಾಗಲೇ 10 ಜೀವಗಳನ್ನು ಬಲಿತೆಗೆದುಕೊಂಡಿರುವ ಅತ್ಯಂತ ಮಾರಣಾಂತಿಕ ನಿಪಾ ವೈರಸ್ ಜ್ವರ ಇದೀಗ ಗೋವಾ ಮತ್ತು ಮುಂಬಯಿಗೂ ಹಬ್ಬುವ ಭೀತಿ ತಲೆದೋರಿದ್ದು ಅಲ್ಲಿನ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.
ನಿಪಾ ವೈರಸ್ ಬಗ್ಗೆ ಕಟ್ಟೆಚ್ಚರದಿಂದರಲು ಗೋವಾ ಆರೋಗ್ಯ ಇಲಾಖೆ ರಾಜ್ಯದಲ್ಲಿನ ಎಲ್ಲ ಆಸ್ಪತ್ರೆಗಳನ್ನು ಕೇಳಿಕೊಂಡಿದೆ. ಅಂತೆಯೇ ಕೇರಳದಿಂದ ಗೋವಾಗೆ ಆಗಮಿಸುವವರರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ ರಾಜ್ಯದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅತ್ಯಪರೂಪದ ಆದರೆ ಮಾರಣಾಂತಿಕ ಎನಿಸಿಕೊಂಡಿರುವ ನಿಫಾ ವೈರಸ್‌ನ ಹರಡುವಿಕೆ ಮತ್ತು ಅದರ ಪರಿಣಾಮಗಳ ಕುರಿತಾಗಿ ಗೋವಾ ಸರಕಾರ ಕೇರಳ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವ ರಾಣೆ ಹೇಳಿದರು.
ಕಳವಳದ ಸಂಗತಿ ಎಂದರೆ ನಿಫಾ ವೈರಸ್ ಪೀಡಿತ ವ್ಯಕ್ತಿಗಳಿಗೆ ಅಥವಾ ಪ್ರಾಣಿಗಳಿಗೆ ಯಾವುದೇ ರೀತಿಯ ವ್ಯಾಕ್ಸಿನ್‌ಗಳು ಲಭ್ಯವಿಲ್ಲ. ಮನುಷ್ಯರ ಸಂದರ್ಭದಲ್ಲಿ ತೀವ್ರ ನಿಗಾ ಸೇವೆಯಷ್ಟೇ ಪ್ರಾಥಮಿಕ ಚಿಕಿತ್ಸಾ ಕ್ರಮವಾಗಿದೆ.