ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕರ ದಾಳಿಗೆ ನಾವೇ ಕಾರಣ – ಪದಚ್ಯುತ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್, ಮೇ 14- ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕರ ದಾಳಿಗೆ ನಾವೇ ಕಾರಣ ಎಂಬ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಪ್ರಚೋದನಾತ್ಮಕ ಹೇಳಿಕೆಯಿಂದ ಪಾಕ್ ಸೇನೆ ತಬ್ಬಿಬ್ಬಾಗಿದೆ.
ಇದೊಂದು ತಪ್ಪುದಾರಿಗೆ ಏಳೆಯುವ ಹೇಳಿಕೆ ಎಂದು ಸ್ಪಷ್ಟಪಡಿಸಲು ಯತ್ನಿಸುತ್ತಿರುವ ಪಾಕಿಸ್ತಾನ ಸೇನೆ ತುರ್ತು ಸಭೆ ನಡೆಸಿ ಷರೀಫ್ ಹೇಳಿಕೆಯಿಂದ ಉದ್ಭವಿಸಿರುವ ಗೊಂದಲ ಮತ್ತು ಆತಂಕಕಾರಿ ಸನ್ನಿವೇಶಗಳ ಬಗ್ಗೆ ಚರ್ಚಿಸಿತು. ಅಲ್ಲದೇ ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‍ಎಸ್‍ಸಿ) ಸಭೆಯನ್ನೂ ನಡೆಸುವ ಬಗ್ಗೆಯೂ ಪಾಕ್ ಪ್ರಧಾನಮಂತ್ರಿ ಶಾಹೀದ್ ಖಾಖನ್ ಅಬ್ಬಾಸಿ ಅವರಿಗೆ ಸಲಹೆ ಮಾಡಿದೆ.
ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಾ, ಉಗ್ರರ ಸುರಕ್ಷಿತ ಸ್ವರ್ಗವಾಗಿರುವ ಬಗ್ಗೆ ವಿಶ್ವಸಂಸ್ಥೆ ಸೇರಿದಂತೆ ಅನೇಕ ದೇಶಗಳ ಕೆಂಗಣ್ಣಿಗೆ ಪಾಕಿಸ್ತಾನ ಗುರಿಯಾಗಿರುವ ಸಂದರ್ಭದಲ್ಲೇ ನವಾಜ್ ಷರೀಫ್ ನೀಡಿರುವ ಈ ಪ್ರಚೋದಾತ್ಮಕ ಹೇಳಿಕೆಯಿಂದ ಪಾಕ್ ಮತ್ತಷ್ಟು ಮುಜುಗರಕ್ಕೀಡಾಗಿದೆ.
ಉದ್ವಿಗ್ನ ಮತ್ತು ಸೂಕ್ಷ್ಮ ಸನ್ನಿವೇಶದ ಸಂದರ್ಭದಲ್ಲೇ ಮಾಜಿ ಪ್ರಧಾನಿ ನೀಡಿರುವ ಈ ಗೊಂದಲಕಾರಿ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಪಾಕಿಸ್ತಾನ ಸೇನೆ ಆತಂಕಗೊಂಡಿದೆ.
ಈ ಸಂಬಂಧ ಎನ್‍ಎಸ್‍ಸಿ ಸಭೆ ನಡೆಸುವಂತೆ ಪ್ರಧಾನಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಪಾಕಿಸ್ಥಾನ ಸಶಸ್ತ್ರ ಪಡೆಗಳ ಅಧಿಕೃತ ವಕ್ತಾರ ಮೇಜರ್ ಜನರಲ್ ಆಸೀಫ್ ಘಫೂರ್ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.
160ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮುಂಬೈ 26/11ರ ಭಯೋತ್ಪಾದನೆ ದಾಳಿ ನಡೆಸಿದ್ದು ನಾವೇ (ಪಾಕಿಸ್ತಾನ) ಎಂದು ಷರೀಫ್ ಹೇಳಿಕೆ ನೀಡಿ ಪಾಕಿಸ್ತಾನವನ್ನು ಪೇಚಿಗೆ ಸಿಲುಕಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ