ಅಧಿಕಾರಿಗಳ ನಿರ್ಲಕ್ಷ್ಯ, ಸಾಫ್ಟ್‍ವೇರ್ ದೋಷ — ಆರ್‍ಟಿಇ ಅರ್ಜಿ ಸಲ್ಲಿಸಲಾಗದೆ ಪೋಷಕರ ಪರದಾಟ

ಬೆಂಗಳೂರು, ಮೇ 14-ಅಧಿಕಾರಿಗಳ ನಿರ್ಲಕ್ಷ್ಯ, ಸಾಫ್ಟ್‍ವೇರ್ ದೋಷದಿಂದಾಗಿ ಆರ್‍ಟಿಇ ಅಡಿ ಅರ್ಜಿ ಸಲ್ಲಿಸಲಾಗದೆ ಪೋಷಕರು ತೀವ್ರ ಪರದಾಡುವಂತಾಗಿದೆ.
ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ. ಹಾಗಾದರೂ ಇದುವರೆಗೂ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ. ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣ ಎಂದು ಪೆÇೀಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ತೊಂದರೆಗೊಳಗಾಗುವಂತಾಗಿದೆ. ಸಾಫ್ಟ್‍ವೇರ್ ತೊಂದರೆಯಿಂದ 2ನೇ ಹಂತದ ಲಾಟರಿ ಪ್ರಕ್ರಿಯೆ ವಿಳಂಬವಾಗಿದೆ.
ಲಾಟರಿ ಪ್ರಕ್ರಿಯೆಗೂ ಮೊದಲೇ ಅಪ್ಲಿಕೇಷನ್ ಮಾಡಿಫಿಕೇಷನ್‍ಗೆ ಶಿಕ್ಷಣ ಇಲಾಖೆ ಅವಕಾಶ ನೀಡಬೇಕಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಮೇ 11 ರಂದು ಶುಕ್ರವಾರ ಮಾಡಿಫಿಕೇಷನ್‍ಗೆ ಇಲಾಖೆ ಅವಕಾಶ ನೀಡಿತ್ತು. ಮರುದಿನ ಶನಿವಾರ ಜೊತೆಗೆ ಚುನಾವಣೆ ಇದ್ದುದರಿಂದ ರಜೆ, ನಂತರ ಭಾನುವಾರ ಹಾಗಾಗಿ ಮಾಡಿಫಿಕೇಷನ್ ಇನ್ನೂ ಮುಗಿದಿಲ್ಲ. ಇಂದು ಮಧ್ಯಾಹ್ನ 3 ಗಂಟೆ ವರೆಗೂ ಮರು ಅರ್ಜಿ ಸಲ್ಲಿಕೆ ಕಾರ್ಯ ಮುಗಿಸಲು ಇಲಾಖೆ ಸೂಚಿಸಿದೆ.

ಒಂದೆಡೆ ಸಾಫ್ಟ್‍ವೇರ್ ದೋಷ ಇರುವುದರಿಂದ ಅರ್ಜಿ ಸಲ್ಲಿಸಲಾಗದೆ ಪೋಷಕರು ಪರದಾಡುತ್ತಿದ್ದಾರೆ. ಹಾಗಾಗಿ ಡೇಟಾ ಸೆಂಟರ್‍ಗಳ ಮುಂದೆ ನೂರಾರು ಪೋಷಕರು ಜಮಾಯಿಸಿ ಮಾಡಿಫಿಕೇಷನ್ ಮಾಡಿಸಲು ಕ್ಯೂ ನಿಂತಿದ್ದಾರೆ.

ದಿನಾಂಕ ವಿಸ್ತರಣೆ:
ಇಂದು ಬೆಳಗ್ಗೆ ಆರ್‍ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಶನಿವಾರ ಬೆಳಗಿನಿಂದ ಇದುವರೆಗೂ ಪೋಷಕರು ನಮ್ಮ ಸಂಘದ ಕಚೇರಿ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಸರ್ವರ್ ಡೌನ್ ಆಗಿರುವುದನ್ನು ಸರಿಪಡಿಸಿಲ್ಲ. ಹೀಗಾದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ ಎಚ್ಚೆತ್ತ ಇಲಾಖೆ ಆಯುಕ್ತರು ಮೇ 16ರವರೆಗೆ ಬೆಳಗ್ಗೆ 10 ಗಂಟೆಯವರೆಗೆ ಮರು ಅರ್ಜಿಯನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ವರ್ ಸ್ಲೋ ಇರುವುದರಿಂದ ಹೀಗೆ ತೊಂದರೆಯಾಗಿದೆ. ಕೂಡಲೇ ಸಾಫ್ಟ್‍ವೇರ್ ಸರಿಪಡಿಸಿ ಪೋಷಕರಿಗಾಗಿರುವ ತೊಂದರೆಯನ್ನು ತಪ್ಪಿಸಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎನ್.ಯೋಗಾನಂದ್,ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಧ್ಯರಾತ್ರಿ ವೇಳೆ ಪೋಷಕರ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶವನ್ನು ಕಳುಹಿಸಿದ್ದುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಸಾವಿರಾರು ಪೋಷಕರು ಆರ್‍ಟಿಇ ಆನ್‍ಲೈನ್ ಕೇಂದ್ರಗಳು, ಸೈಬರ್ ಸೆಂಟರ್‍ಗಳಿಗೆ ಅಲೆದಾಡುತ್ತಿದ್ದಾರೆ ಎಂದು ಇಲಾಖೆ ಆಯುಕ್ತರ ಗಮನಕ್ಕೆ ತಂದ ನಂತರ ದಿನಾಂಕವನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ