ಸುಧಾರಿಸಿದ ಚುನಾವಣಾ ಪದ್ಧತಿ – ಇವಿಎಂ ತಾಂತ್ರಿಕ ದೋಷ ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಉತ್ತಮ

ಬೆಂಗಳೂರು, ಮೇ 14-ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು, ಸಾರ್ವಜನಿಕರ ಸ್ವಯಂಪ್ರೇರಿತ ಜಾಗೃತಿಯೋ, ಸುಧಾರಿಸಿದ ಚುನಾವಣಾ ಪದ್ಧತಿಗಳೋ ಒಟ್ಟಾರೆ ಮೇ 12 ರಂದು ರಾಜ್ಯದ ವಿಧಾನಸಭೆ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಅಲ್ಲದೆ ದಾಖಲೆ ಪ್ರಮಾಣದ ಮತದಾನವಾಗಿದೆ.

ಚುನಾವಣೆ ಎಂದರೆ ದುಗುಡ, ಆತಂಕ ಎದುರಾಗುತ್ತಿತ್ತು. ಎಲ್ಲಿ ಏನಾಗುತ್ತದೋ, ಯಾವ ಭಾಗದಲ್ಲಿ ಗಲಾಟೆಗಳು ಸೃಷ್ಟಿಯಾಗುತ್ತವೋ, ಕೊಲೆ, ಕೋಮುದ್ವೇಷ ಉಂಟಾಗುತ್ತವೋ ಎಂಬ ಆತಂಕ ಕಾಡುವುದು ಸಾರ್ವಜನಿಕರಿಗೆ ಸಾಮಾನ್ಯವಾಗಿತ್ತು.

ಮತಗಟ್ಟೆಗಳ ಸಮೀಪ ಭಯದ ವಾತಾವರಣ ಸೃಷ್ಟಿಸುವುದು, ಮತದಾರರಿಗೆ ಬೆದರಿಕೆ ಹಾಕುವುದು, ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಘಟನೆಗಳು ನಡೆದ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.

ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ, ಮಲೆನಾಡು ಭಾಗದಲ್ಲಿ ನಕ್ಸಲ್ ಭೀತಿ, ಬಳ್ಳಾರಿ, ರಾಯಚೂರು, ಮುಂತಾದೆಡೆ ಮತದಾನ ಮಾಡದಂತೆ ತಡೆಯುವ ಕ್ರಮಗಳು ನಡೆಯುತ್ತಿದ್ದವು. ಭಾರೀ ಪ್ರಮಾಣದಲ್ಲಿ ಹಣದ ವಹಿವಾಟು ಮತದಾನದ ಕೊನೆ ಕ್ಷಣದವರೆಗೂ ಹಣ ಹಂಚಿಕೆಯನ್ನು ಬಹುತೇಕ ಅಭ್ಯರ್ಥಿಗಳು, ಬೆಂಬಲಿಗರು ಮಾಡುತ್ತಿದ್ದರು. ಅಲ್ಲದೆ, ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದರು. ಮತದಾನ ಮಾಡುವುದಕ್ಕೆ ಪ್ರೇರಣೆ ನೀಡುತ್ತಿದ್ದರು.

ಮತಗಟ್ಟೆ ಸುತ್ತಮುತ್ತಲೂ ವ್ಯಾಪಕ ಮತಪ್ರಚಾರವೂ ಕೂಡ ಈ ಹಿಂದೆ ನಡೆಯುತ್ತಿತ್ತು. ಪಕ್ಷದ ಏಜೆಂಟರು ಮತಗಟ್ಟೆ ಬಳಿ ಕುಳಿತು ಕೊನೆ ಕ್ಷಣದ ಮತ ಪ್ರಚಾರ ಮಾಡುತ್ತಿದ್ದರು. ಆದರೆ ಈ ಬಾರಿ ಚುನಾವಣಾ ಆಯೋಗ ಇವೆಲ್ಲವಕ್ಕೂ ಕಡಿವಾಣ ಹಾಕಿದೆ. ಸಣ್ಣಪುಟ್ಟ ಘಟನೆಗಳು, ಮಾತಿನ ಚಕಮಕಿ, ಹೊರತುಪಡಿಸಿದರೆ, ಇನ್ಯಾವುದೇ ಅಹಿತಕರ ಘಟನೆಗಳು ರಾಜ್ಯದ ಯಾವುದೇ ಭಾಗದಲ್ಲಿ ನಡೆಯಲಿಲ್ಲ. ಅಷ್ಟು ಶಾಂತಿಯುತವಾಗಿ ಚುನಾವಣೆ ನಡೆಯಿತು.

ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆಯೇ ಇಲ್ಲವೋ ಎಂಬುವಷ್ಟರ ಮಟ್ಟಿಗೆ ಶಾಂತಿಯುತವಾಗಿತ್ತು ಮತ್ತು ದಾಖಲೆ ಮತದಾನವಾಗಿದ್ದು, ಅತ್ಯಂತ ವಿಶೇಷ.
ಮಹಿಳೆಯರು, ಹಿರಿಯ ನಾಗರಿಕರು, ಹೊಸ ಮತದಾರರು ಹುರುಪಿನಿಂದ ಬಂದು ಮತ ಚಲಾಯಿಸಿದರು.

ಚುನಾವಣಾ ಆಯೋಗ ಹೆಚ್ಚಿನ ಪ್ರಮಾಣದ ಮತದಾನವಾಗಬೇಕೆಂಬ ಉದ್ದೇಶದಿಂದ ಕೈಗೊಂಡ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಜನರು ಸ್ವಯಂಪ್ರೇರಿತರಾಗಿ ಬಂದು ಮತ ಚಲಾಯಿಸಿದ್ದಾರೆ. ಆಯೋಗ ಚಾಪೆ ಕೆಳಗೆ ನುಸುಳಿದರೆ ಅಭ್ಯರ್ಥಿಗಳು, ಅವರ ಬೆಂಬಲಿಗರು ರಂಗೋಲಿ ಕೆಳಗೆ ನುಸುಳುತ್ತಾರೆ. ಹಲವೆಡೆ ವಾಮಮಾರ್ಗದಲ್ಲಿ ಮತದಾರರ ಮನವೊಲಿಸಲು ಕೆಲವು ಆಮಿಷಗಳನ್ನು ಒಡ್ಡಿದ್ದು ಕಂಡುಬಂತು. ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟು ಇವೆಲ್ಲವನ್ನು ನಿಯಂತ್ರಿಸಿತು.

ಇನ್ನು ಚುನಾವಣಾ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಹಣದ ವಹಿವಾಟು ನಡೆಯುತ್ತದೆ. ಆನ್‍ಲೈನ್, ಬ್ಯಾಂಕ್‍ಗಳ ಮೂಲಕ ನೇರ ನಗದು ವಹಿವಾಟು ನಡೆಯುತ್ತದೆ. ಇವುಗಳ ಮೇಲೆ ಮೊದಲೇ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ನಿರಂತರ ದಾಳಿ ನಡೆಸಿದರು. ಹಾಗಾಗಿ ಸುಮಾರು 200 ಕೋಟಿ ರೂ.ಗಳಷ್ಟು ಹಣವನ್ನು, ಚುನಾವಣಾಧಿಕಾರಿಗಳು, ಪೆÇಲೀಸರು, ಐಟಿ ಅಧಿಕಾರಿಗಳು ವಶಪಡಿಸಿಕೊಂಡರು.

ಕೋಟ್ಯಂತರ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡರು. ಇಷ್ಟು ಪ್ರಮಾಣದ ಹಣ ಚುನಾವಣೆಯಲ್ಲಿ ಚಲಾವಣೆಯಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಸಾಧ್ಯವಾಗುತ್ತಿರಲಿಲ್ಲವೇನೋ. ಆಯೋಗ ಅತ್ಯಂತ ಕಠಿಣ ನಿಲುವುಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

ಬೀದರ್‍ನಿಂದ ಕೋಲಾರದವರೆಗೂ, ಬಳ್ಳಾರಿಯಿಂದ ಚಾಮರಾಜನಗರದವರೆಗೂ ಹೈವೋಲ್ಟೇಜ್ ಕ್ಷೇತ್ರಗಳಾದ ಚನ್ನಪಟ್ಟಣ, ಚಾಮುಂಡೇಶ್ವರಿ, ಬಾದಾಮಿ, ರಾಮನಗರ, ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ.

ಕಲ್ಲು ತೂರಾಟ, ಲಾಠಿ ಪ್ರಹಾರ, ಮರು ಮತದಾನ ಮುಂತಾದ ಘಟನೆಗಳಿಗೆ ಚುನಾವಣೆ ಸಾಕ್ಷಿಯಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ. ರಾಜ್ಯದ ಒಂದೆರಡು ಮತಗಟ್ಟೆಗಳಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮರು ಮತದಾನ ಮಾಡಬೇಕಾಯಿತು. ಅಷ್ಟನ್ನು ಹೊರತುಪಡಿಸಿದರೆ ಕಾನೂನು ಸುವ್ಯವಸ್ಥೆ ಉತ್ತಮವಾಗಿತ್ತು.

ವಿವಿಧ ರಾಜಕೀಯ ಪಕ್ಷಗಳ ಭಾರೀ ಬಹಿರಂಗ ಸಭೆಗಳು, ರೋಡ್‍ಶೋಗಳು, ರ್ಯಾಲಿಗಳು ನಡೆದವು. ಈ ಸಂದರ್ಭದಲ್ಲಿ ಸಾರ್ವಜನಿಕರು, ಕಾರ್ಯಕರ್ತರು ಸಂಯಮ ಕಾಪಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ 21 ಸಮಾವೇಶಗಳನ್ನು ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ 400 ರ್ಯಾಲಿಗಳನ್ನು ಮಾಡಿದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಜನಾಶೀರ್ವಾದ ಯಾತ್ರೆ, ಚುನಾವಣಾ ಪ್ರಚಾರ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕಿಲೋ ಮೀಟರ್ ಪ್ರವಾಸ ಮಾಡಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಕೂಡ ಆಗಮಿಸಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದರು. ಭಾರೀ ಸಮಾರಂಭಗಳು, ಬಹಿರಂಗಸಭೆ, ಪಾದಯಾತ್ರೆ, ರ್ಯಾಲಿ ಮುಂತಾದ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು.

ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ. ಚುನಾವಣಾಧಿಕಾರಿಗಳು, ಪೆÇಲೀಸರ ಮುನ್ನೆಚ್ಚರಿಕೆ ಕ್ರಮ ಫಲ ನೀಡಿದೆ. ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಚುನಾವಣಾ ಆಯೋಗ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿತ್ತು.

ಸಾರ್ವಜನಿಕರು ಕೂಡ ನಮಗೇಕೆ ಗಲಾಟೆ ಉಸಾಬರಿ. ನಮಗೆ ಬೇಕಾದ ಅಭ್ಯರ್ಥಿಗೆ ಮತ ನೀಡಿದರೆ ಸಾಕು ಎಂಬ ಧೋರಣೆಯಲ್ಲಿದ್ದರು. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ಈ ಚುನಾವಣೆಯಲ್ಲಿ ನಡೆಯದಿರುವುದು ಸಮಾಧಾನಕರ ವಿಷಯ. ಇದರಿಂದ ಚುನಾವಣಾ ಆಯೋಗಕ್ಕೆ, ಪೆÇಲೀಸ್ ಇಲಾಖೆಗೆ ಒಳ್ಳೆಯ ಹೆಸರು ಬಂದಿದೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಚುನಾವಣೆ ಎಂದರೆ ಒಂದು ರೀತಿಯ ಆತಂಕವೇ ಸೃಷ್ಟಿಯಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಗೋಜು ಗದ್ದಲವಿಲ್ಲದೆ ಶಾಂತಿಯುತವಾಗಿ ನಡೆದಿದೆ. ನಾಳೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶಕ್ಕಾಗಿ ಕಣದಲ್ಲಿರುವವರು ಕಾತುರರಾಗಿ ಕಾಯುತ್ತಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ