ಬಿ.ಎನ್.ವಿಜಯ್‍ಕುಮಾರ್ ಅವರಿಗೆ ಬಿಜೆಪಿ ಶ್ರದ್ಧಾಂಜಲಿ

ಬೆಂಗಳೂರು, ಮೇ 14-ಇತ್ತೀಚೆಗೆ ನಿಧನರಾದ ಸಜ್ಜನ ರಾಜಕಾರಣಿ ಜಯನಗರ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರಿಗೆ ಬಿಜೆಪಿ ಬೆಂಗಳೂರು ನಗರ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಸವನಗುಡಿಯಲ್ಲಿರುವ ಮರಾಠ ಹಾಸ್ಟೆಲ್ ಆವರಣದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೇಂದ್ರ ಸಚಿವರ ಅನಂತ್‍ಕುಮಾರ್, ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ಆರ್.ಅಶೋಕ್ ಸೇರಿದಂತೆ ನಗರ ಬಿಜೆಪಿ ಪದಾಧಿಕಾರಿಗಳು ಪಾಲ್ಗೊಂಡು ವಿಜಯ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಆರ್.ಅಶೋಕ್ ಮಾತನಾಡಿ, ವಿಜಯ್‍ಕುಮಾರ್ ಅವರು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಅನಾರೋಗ್ಯವಿದ್ದರೂ ವಿಶ್ರಾಂತಿ ತೆಗೆದುಕೊಳ್ಳದೆ ಪಕ್ಷಕ್ಕಾಗಿ ದುಡಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ಕೆಲವರು ಬದುಕಿದ್ದರೂ ಸತ್ತಂತಿರುತ್ತಾರೆ. ಇನ್ನು ಕೆಲವರು ಸತ್ತೂ ಬದುಕಿರುತ್ತಾರೆ. ವಿಜಯ್‍ಕುಮಾರ್ ಸತ್ತೂ ಕೂಡ ಬದುಕಿದ್ದಾರೆ ಎಂದು ಅಶೋಕ್ ಭಾವುಕರಾದರು.

ರಾಜಕೀಯ ಬಹಳಷ್ಟ ಕೆಟ್ಟು ಹೋಗಿದೆ. ಹಣ, ರೌಡಿಸಂ, ಕಿರುಕುಳ ಹೆಚ್ಚಾಗಿದೆ. ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ. ಆದರೆ ವಿಜಯ್‍ಕುಮಾರ್ ಎಂದಿಗೂ ಹೊಂದಾಣಿಕೆ ಮಾಡಿಕೊಂಡವರಲ್ಲ ಎಂದರು.

ಪರಿಷತ್ ಸದಸ್ಯ ರಾಮಚಂದ್ರಗೌಡ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವುಖಚಿತ. ಹುಟ್ಟು-ಸಾವಿನ ಮಧ್ಯೆದ ಬದುಕು ಹೇಗೆ ಎನ್ನುವುದೇ ಮುಖ್ಯ. ಸೋಲು-ಗೆಲುವಿನಲ್ಲೂ ಸ್ಥಿತಪ್ರಜ್ಞೆವುಳ್ಳ ವ್ಯಕ್ತಿ ವಿಜಯ್‍ಕುಮಾರ್. ಆರ್‍ಎಸ್‍ಎಸ್‍ನಲ್ಲಿ ಬೆಳೆದರೂ ಸರಳ ಶ್ರೇಷ್ಟವಾಗಿ ಬೆಳೆದವರು. ಅಡ್ಡದಾರಿ ಹಿಡಿಯದೆ ಬೂಟಾಟಿಕೆ ಮಾಡದೆ ರಾಜಕಾರಣ ಮಾಡಬೇಕು ಎಂದು ಹೇಳಿದರು.

ವಿಜಯ್‍ಕುಮಾರ್ ಅವರು ಬೆಂಗಳೂರು ಜಿಲ್ಲಾಧ್ಯಕ್ಷರಾಗಿದ್ದಾಗ ಅವರ ವಿರುದ್ಧ ಒಂದು ದೂರು ಬಂದಿಲ್ಲ. ನೇರ ನುಡಿ ಸ್ವಭಾವವುಳ್ಳವಾಗಿದ್ದರು. ಇಂದು ಕೇವಲ ಮುಖಸ್ತುತಿ ಮಾತ್ರ ಉಳಿದಿದೆ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಮನುಷ್ಯ ಎಂದಿಗೂ ಚಿರಂಜೀವಿಯಾಗಿರಲಾರ. ಆತನ ಕಾರ್ಯ, ಚಿಂತನೆ, ಆದರ್ಶಗಳು ಮಾತ್ರ ಜೀವಂತವಾಗಿರುತ್ತವೆ. ವಿಜಯ್‍ಕುಮಾರ್ ಅವರ ಮರು ಹುಟ್ಟು ನಮ್ಮಗಳ ಮಧ್ಯೆ ಆದಷ್ಟು ಬೇಗ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ