ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ: ಆಯೋಗದಿಂದ ಸಕಲ ಸಿದ್ಧತೆ

ಬೆಂಗಳೂರು:ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಮತದಾನಕ್ಕಾಗಿ ಒಟ್ಟು 58 ಸಾವಿರ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

58 ಸಾವಿರ ಮತಗಟ್ಟೆಗಳ ಪೈಕಿ 600 ಮತಗಟ್ಟೆಗಳು ಮಹಿಳಾ ವಿಶೇಷ ಮತಗಟ್ಟೆಗಳಾಗಿರಲಿದ್ದು, ಇಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. ಈ ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾ ಮತದಾರರು ಮಾತ್ರ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ವಿಕಲಾಂಗರಿಗೆ 10 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಅಂಗವಿಕಲ ಮತದಾರರನ್ನು ಕರೆ ತರಲು ವಾಹನ ವ್ಯವಸ್ಥೆ ಕೂಡ ಮಾಡಲಾಗಿದೆ.
ಮತದಾನಕ್ಕೆ 80 ಸಾವಿರ ವಿವಿಪ್ಯಾಟ್‍ಗಳನ್ನು ಬಳಕೆ ಮಾಡಲಾಗುತ್ತಿದ್ದು, ಇವುಗಳ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ.

ಈ ಮಧ್ಯೆ ಈವರೆಗೂ ಆಯೋಗದ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 70 ಕೋಟಿ ನಗದು, 32 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೇ 12ರಂದು ಮತದಾನ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮೇ 15ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದೇ 225 ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ನಿರ್ಧಾರವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ